ಬಗರ್ ಹುಕುಂ ಸಾಗುವಳಿ: ಹಕ್ಕುಪತ್ರ ನೀಡಲು ಆಗ್ರಹ
ಹುಳಿಯಾರು, ಆ. ೧೦- ಬಗರ್ ಹುಕುಂ ಸಭೆ ನಡೆಸಿ ಸಾಗುವಳಿ ಮಾಡುತ್ತಿರುವ ಭೂ ರಹಿತ ರೈತರಿಗೆ ಭೂಮಿ ಮಂಜೂರು ಮಾಡಿಕೊಡುವಂತೆ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮೂನೆ ೫೭ ರಡಿ ಅರ್ಜಿ ಹಾಕಿದ, ಅಥವಾ ಹಾಕದೇ ಹಲವಾರು ವರ್ಷಗಳಿಂದ ಸರ್ಕಾರಿ ಭೂಮಿಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರಗಳ ಅವಶ್ಯಕತೆ ಇದೆ. ಹಕ್ಕು ಪತ್ರ ಇಲ್ಲದಿರುವುದರಿಂದ ಕೃಷಿ ಸಮ್ಮಾನ ಸೇರಿದಂತೆ ಸರ್ಕಾರಿ ಯೋಜನೆಗಳ ಸೌಲಭ್ಯದಿಂದ ಹಾಗೂ ಕೃಷಿ, ತೋಟಗಾರಿಕಾ ಮತ್ತು ರೇಷ್ಮೆ ಇಲಾಖೆಯ ಸಹಾಯ ಧನದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಸಮಸ್ಯೆ ವಿವರಿಸಿದ್ದಾರೆ.
ಸರ್ಕಾರ ಈಗಾಗಲೇ ಬಗರ್ ಹುಕುಂ ಸಮಿತಿಗೆ ಸದಸ್ಯರನ್ನು ನೇಮಿಸಿದ್ದು ತಹಶೀಲ್ದಾರ್ ಅವರು ತಕ್ಷಣ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅರ್ಹ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಿ ಸರ್ಕಾರದ ಸಾಲ ಸೌಲಭ್ಯ ಪಡದು ರೈತರು ಮತ್ತಷ್ಟು ಆರ್ಥಿಕ ಸಬಲರಾಗುವಂತೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.