ಸಬ್ಬೇನಹಳ್ಳಿ-ಬೂತನಗುಡಿ ರಸ್ತೆ ದುರಸ್ಥಿಗೆ ಆಗ್ರಹ
ಚಿಕ್ಕನಾಯಕನಹಳ್ಳಿ, ಆ. ೧೦- ತಾಲ್ಲೂಕಿನ ಗಡಿ ಗ್ರಾಮ ಸಬ್ಬೇನಹಳ್ಳಿಯ ಬೂತನಗುಡಿ ಮಾರ್ಗದ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ತಕ್ಷಣ ಸರಿಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಕೆಆರ್‌ಎಸ್ ಪಕ್ಷದ ಸಂಚಾಲಕ ಸಬ್ಬೇನಹಳ್ಳಿ ಶ್ರೀನಿವಾಸ್ ಆಗ್ರಹಿಸಿದ್ದಾರೆ.
ತಾಲ್ಲೂಕಿನ ಹಂದನಕೆರೆ ಹೋಬಳಿ ಸಬ್ಬೇನಹಳ್ಳಿ ಗ್ರಾಮವು ತಾಲ್ಲೂಕಿನ ಗಡಿ ಭಾಗದಲ್ಲಿದ್ದು, ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಈ ಗ್ರಾಮದ ಮುಖ್ಯ ರಸ್ತೆಯಾಗಿರುವ ಬೂತನಗುಡಿ ತಿಪಟೂರು- ಹೊಸದುರ್ಗಕ್ಕೆ ಸಂಪರ್ಕ ಕಲ್ಟಿಸುವ ಸುಮಾರು ೩ ಕಿ.ಮೀ.ಮಾರ್ಗ ಗುಂಡಿಗಳಿಂದ ಕೂಡಿದ್ದು ಸಂಪೂರ್ಣವಾಗಿ ಹಾಳಾಗಿ ಸಂಚಾರಕ್ಕೆ ತೊಂದರೆಯಾಗಿದೆ ಎಂದರು.
ಬೇಸಿಗೆಯಲ್ಲಿ ಈ ಮಾರ್ಗದ ಸಂಚಾರಕ್ಕೆ ಕಷ್ಟಪಡುವ ಸನ್ನಿವೇಶವಿದ್ದು, ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಈ ರಸ್ತೆ ತುಂಬಾ ಅವ್ಯವಸ್ಥೆಯಾಗಿದ್ದು ಕಾಲಿಡಲೂ ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗದಲ್ಲಿ ಪ್ರತಿದಿನ ಜನಸಂಚಾರದ ಜತೆಗೆ ಶಾಲಾ ವಾಹನ, ಮೇಘಲಹಟ್ಟಿ ಬೋವಿ ಕಾಲೋನಿಯಿಂದ ವಿದ್ಯಾರ್ಥಿಗಳು ಈ ದಾರಿಯನ್ನೆ ಬಳಸುತ್ತಿದ್ದಾರೆ. ಸದರಿ ಮಾರ್ಗವು ಬಾಣಾವರ, ಗವಿರಂಗನಾಥಸ್ವಾಮಿ ಕ್ಷೇತ್ರ, ಬೆಲಗೂರು, ಹೊಸದುರ್ಗ, ಪಂಚನಹಳ್ಳಿ , ಶ್ರೀರಾಂಪುರ ಮುಂತಾದ ಕಡೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಬಳಸುತ್ತಿದ್ದಾರೆ.ಸಂಬಂಧಪಟ್ಟ ಇಲಾಖೆಯವರು ತಕ್ಷಣ ರಸ್ತೆಯನ್ನು ಸರಿಪಡಿಸದಿದ್ದರೆ ಕೆಆರ್‌ಎಸ್ ಪಕ್ಷವು ಸ್ಥಳೀಯ ಗ್ರಾಮಸ್ಥರೊಂದಿಗೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.