ಅಲೆಮಾರಿ ಸಮುದಾಯದ ಸಮಸ್ಯೆ ಪರಿಹರಿಸಲು ನಿರ್ಲಕ್ಷ್ಯ: ಅಹೋರಾತ್ರಿ ಧರಣಿ ಎಚ್ಚರಿಕೆ
ಚಿಕ್ಕನಾಯಕನಹಳ್ಳಿ, ಆ. ೧೦- ತಾಲ್ಲೂಕಿನ ಅಲೆಮಾರಿ ಸಮುದಾಯಗಳ ಸಮಸ್ಯೆಗಳ ಕುರಿತಂತೆ ಹಲವು ಹೋರಾಟಗಳನ್ನು ನಡೆಸಿದರೂ ಯಾವುದೇ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಈ ಕುರಿತು ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದರೆ ಅನಿರ್ಧಿಷ್ಠಾವಧಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ತಾಲ್ಲೂಕು ಅಲೆಮಾರಿ ಬುಡಕಟ್ಟು ಮಹಾಸಭಾ ಎಚ್ಚರಿಕೆ ನೀಡಿದೆ.
ಅಲೆಮಾರಿಗಳ ಸಮಸ್ಯೆಗಳ ಬಗ್ಗೆ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಸಂಘಟನೆ, ಕಳೆದ ಜುಲೈ ತಿಂಗಳಿನಲ್ಲಿ ತುಮಕೂರು ಜಿಲ್ಲೆಯ ಎಡಿಸಿ ಶಿವಾನಂದ ಕರಾಳೆಯವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆಂಕೆರೆ ಗ್ರಾಮ ಪಂಚಾಯ್ತಿ ಗೌಡಗೆರೆ ಸರ್ವೆ ನಂಬರ್‌ನಲ್ಲಿ ಬರುವ ಅಲೆಮಾರಿ ನಗರದ ಅಭಿವೃದ್ದಿ ಹಾಗೂ ಮೂಲಭೂತ ಸೌಕರ್ಯಕ್ಕೆ ಸಂಬಂಧಪಟ್ಟಂತೆ ಖುದ್ದು ಸ್ಥಳ ಪರಿಶೀಲನೆ ನಡೆಸಿ ಸೂಚನೆ ನೀಡಿದ್ದರು. ಅದರ ಬಗ್ಗೆ ತಿಳಿಸುವಂತೆಯೂ ಹಾಗೂ ಆ ಸೂಚನೆಯ ಪ್ರಗತಿ ಎಲ್ಲಿವರೆಗೆ ಬಂದಿತೆಂಬ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.
ಅಲೆಮಾರಿ ನಗರದಲ್ಲಿ ಈಗಾಗಲೇ ಕೊಟ್ಟಿರುವ ಸೈಟ್‌ಗಳ ಅಭಿವೃದ್ದಿ ಹಾಗೂ ತಾಲ್ಲೂಕಿನ ಇನ್ನಿತರೆ ಅಲೆಮಾರಿ ಜನಾಂಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ದಿಗೆ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು, ಅಲೆಮಾರಿ ಮಕ್ಕಳ ಹಕ್ಕುಗಳ ರಕ್ಷಣೆ, ಶೈಕ್ಷಣಿಕ ಅಭಿವೃದ್ದಿ, ಪೌಷ್ಠಿಕ ಬೆಳವಣಿಗೆಗೆ ಸಂಬಂಧಿಸಿದ ಕಾರ್ಯಸೂಚಿಗಳ ಬಗ್ಗೆ ಕ್ರಮವಹಿಸಿ ಶೀಘ್ರವಾಗಿ ಅಲೆಮಾರಿಗಳ ಸಮುದಾಯಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.
ತುಮಕೂರು ಜಿಲ್ಲಾ ಅಲೆಮಾರಿ ಬುಡಕಟ್ಟು ಮಹಾಸಭಾ ಪ್ರಧಾನ ಕಾರ್ಯದರ್ಶಿ ರಾಜಪ್ಪ ಹುಳಿಯಾರು ಮಾತನಾಡಿ, ಅಲೆಮಾರಿ ಜನಾಂಗದವರಿಗೆ ಮೀಸಲಿರಿಸಿರುವ ಹಕ್ಕುಪತ್ರ ವಿತರಿಸಿ ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಲೆಮಾರಿ ಜನಾಂಗದ ಮುಖಂಡರುಗಳಾದ ರಂಗನಾಥ್, ಶಾಂತರಾಜು, ಸಣ್ಣಲಕ್ಷ್ಮಮ್ಮ, ರೇಣುಕಮ್ಮ ಮತ್ತಿತರರು ಉಪಸ್ಥಿತರಿದ್ದರು.