ಸಮಗ್ರ ಕೃಷಿ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ: ಅನ್ಬುಕುಮಾರ್
ಕೊರಟಗೆರೆ, ಆ. ೧೦- ಸಮಗ್ರ ಕೃಷಿ ವ್ಯವಸಾಯದ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ ರೈತರು ವಿವಿಧ ಇಲಾಖೆಗಳ ಸವಲತ್ತುಗಳನ್ನು ಬಳಸಿಕೊಂಡು ಪ್ರಗತಿಪರ ರೈತರಾಗುವುದು ಕೃಷಿ ಇಲಾಖೆಯ ಗುರಿಯಾಗಿದೆ ಎಂದು ಕೃಷಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅನ್ಬುಕುಮಾರ್ ಹೇಳಿದರು.
ತಾಲ್ಲೂಕಿನ ಕೋಳಾಲ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆಗೆ ಡ್ರೂನ್ ಮುಖಾಂತರ ನ್ಯಾನೋ ದ್ರವ ಯೂರಿಯಾ ಮತ್ತು ಡಿ.ಐ.ಪಿ. ಸಿಂಪಡಿಸುವ ಪರೀಕ್ಷಾರ್ತ ಪ್ರಯೋಗವನ್ನು ವೀಕ್ಷಿಸಿ ಮತ್ತು ಹೊಳವನಹಳ್ಳಿ ಹೋಬಳಿಯ ಬಿ.ಡಿ.ಪುರ ಗ್ರಾಮದ ರೈತ ನರಸಿಂಹರಾಜು, ಅನಿತಾ ದಂಪತಿಗಳ ಜಮೀನಿನಲ್ಲಿ ಸಮಗ್ರ ಕೃಷಿ ವ್ಯವಸಾಯವನ್ನು ಪರೀಶೀಲಿಸಿ ಅವರು ಮಾತನಾಡಿದರು.
ಇತ್ತೀಚೆಗೆ ವ್ಯವಸಾಯದಲ್ಲಿ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿ ರೈತರು ಸಾಕಷ್ಟು ಪ್ರಗತಿ ಹೊಂದುತ್ತಿದ್ದಾರೆ. ಈ ದಿಸೆಯಲ್ಲಿ ಬಿ.ಡಿ.ಪುರ ಗ್ರಾಮದ ೫ ಎಕರೆ ಜಮೀನಿನಲ್ಲಿ ಈ ದಂಪತಿಗಳು ವ್ಯವಸಾಯ, ತೋಟಗಾರಿಕೆ, ಅರಣ್ಯ, ಜೇನು ಕೃಷಿ, ಸುಗಂಧ ಹೂ ಹಾಗೂ ಹೈನುಗಾರಿಕೆಯನ್ನು ಮಾಡುತ್ತಿದ್ದು ಲಾಭದಾಯಕ ಪ್ರಗತಿಪರ ರೈತರಾಗಿದ್ದಾರೆ. ಈ ನಿಟ್ಟಿನಲ್ಲಿ ರೈತರಿಗೆ ಒಂದೇ ಕೃಷಿಯನ್ನು ಅವಲಂಬಿಸದೆ ಎಲ್ಲ ತರಹದ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವಂತೆ ಇಲಾಖೆ ವತಿಯಿಂದ ಅರಿವು ಮೂಡಿಸಿ ಮತ್ತು ತರಬೇತಿಯನ್ನು ನೀಡಲಾಗುವುದು ಹಾಗೂ ರೈತರಿಗೆ ಇಲಾಖೆಗಳಿಂದ ನೀಡುವ ಸವಲತ್ತು ಮತ್ತು ಸೌಲಭ್ಯಗಳನ್ನು ತ್ವರಿತವಾಗಿ ನೀಡುವಂತೆ ಇಲಾಖೆಗಳಿಗೆ ಆದೇಶಿಸಲಾಗಿದೆ ಎಂದರು.
ಸರ್ಕಾರ ರೈತರ ಜಮೀನಿನಲ್ಲಿ ಬೆಳೆದಂತ ಬೆಳೆಗಳಿಗೆ ನೂತನವಾಗಿ ಡ್ರೋನ್‌ನಿಂದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಐ.ಪಿ ಸಿಂಪಡಿಸುವ ಯೋಜನೆಯನ್ನು ಅಳವಡಿಸಲು ಉದ್ದೇಶಿಸಲಾಗಿದೆ, ಈ ಕ್ರಮದಲ್ಲಿ ಯೂರಿಯಾವನ್ನು ನೇರವಾಗಿ ಬೆಳೆಗಳಿಗೆ ಸಿಂಪಡಿಸಬಹುದು. ಇದರಿಂದ ಮಣ್ಣಿನ ಜೀವಸತ್ವ ಸಾರಾಂಶವನ್ನು ಉಳಿಸಿಕೊಂಡಂತಾಗುತ್ತದೆ. ಬೆಳೆಗಳು ಉತ್ತಮವಾಗಿ ಬೆಳೆದು ಕಡಿಮೆ ಖರ್ಚು ಹಾಗೂ ಶ್ರಮದಲ್ಲಿ ರೈತರು ಇದರ ಉಪಯೋಗವನ್ನು ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಅಪಾರ ಕೃಷಿ ನಿರ್ದೇಶಕ ವೆಂಕಟರಮಣರೆಡ್ಡಿ, ತುಮಕೂರು ಜಂಟಿ ನಿರ್ದೇಶಕ ರಮೇಶ್, ಮಧುಗಿರಿ, ತುಮಕೂರು ಉಪ ನಿರ್ದೇಶಕರುಗಳಾದ ದೀಪಶ್ರೀ, ಹುಲಿರಾಜು, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ರುದ್ರಪ್ಪ, ಕೃಷಿ ಅಧಿಕಾರಿಗಳಾದ ನಾಗರಾಜು, ವಿಜಯನಾರಸಿಂಹ ಉಪಸ್ಥಿತರಿದ್ದರು.