ಆ. ೧೨: ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ
ತುಮಕೂರು, ಆ. ೧೦- ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆ. ೧೨ ರಂದು ರಾಜ್ಯ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ತಿಮ್ಮೇಗೌಡ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ ೨೦೧೭ ರ ವೃಂದ ಮತ್ತು ನೇಮಕಾತಿ ನಿಯಮಗಳು ೨೦೧೬ ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿ, ಮೂಲತಃ ೧ ರಿಂದ ೭, ೮ ಕ್ಕೆ ನೇಮಕ ಹೊಂದಿದ ಶಿಕ್ಷಕರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ ೧ ರಿಂದ ೫ ಕ್ಕೆ ಹಿಂಬಡ್ತಿ ನೀಡಿದೆ. ಇದರಿಂದ ಸುಮಾರು ೧.೨೦ ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಹಾಗಾಗಿ ಕೂಡಲೇ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ೨೦೧೬ ಕ್ಕಿಂತ ಮುಂಚೆ ನೇಮಕ ಹೊಂದಿದ ಶಿಕ್ಷಕರನ್ನು ಎನ್‌ಸಿಟಿ ಈ ನಿಯಮಾವಳಿ ಪ್ರಕಾರ ಪದವಿ ವಿದ್ಯಾರ್ಹತೆ ಹೊಂದಿದ ಎಲ್ಲ ಸೇವಾನಿರತ ಶಿಕ್ಷಕರನ್ನು ಜಿಪಿಟಿ ಶಿಕ್ಷಕರೆಂದು ಸೇವಾ ಜೇಷ್ಠತೆಯೊಂದಿಗೆ ಪುನರ್ ಪದನಾಮಕರಣ ಮಾಡಬೇಕು ಎಂಬುದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಯಾಗಿದೆ.
ಈ ಮೊದಲಿನ ಪ್ರೌಢಶಾಲಾ ಬಡ್ತಿ ನಿಯಮಾವಳಿಯಂತೆ ೨೦೧೬ ರ ಮುಂಚೆ ನೇಮಕಾತಿ ಹೊಂದಿದ ಹಾಗೂ ಬಿ ಇಡಿ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಖಾಲಿಯಾಗುವವರೆಗೂ ಪ್ರೌಢಶಾಲೆಗೆ ಬಡ್ತಿ ನೀಡಬೇಕು, ತದನಂತರದಲ್ಲಿ ಹೊಸದಾಗಿ ನೇಮಕಗೊಂಡ ಜಿಪಿಟಿ ಶಿಕ್ಷಕರನ್ನು ಪರಿಗಣಿಸಬೇಕು, ಈ ಮುಂಚಿನ ನಿಯಮಾವಳಿಯಂತೆ ಮುಖ್ಯ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆಯನ್ನು ಪರಿಗಣಿಸದೇ ಅಖಂಡ ಸೇವಾಹಿರಿತನದ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭನೆ ಅಂಗವಾಗಿ ಆ.೧ ರಿಂದಲೇ ವಿವಿಧ ಸ್ವರೂಪದ ಹೋರಾಟಗಳನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಈ ಹೋರಾಟದಲ್ಲಿ ಬಾಧಿತ ೧ ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ತಿಮ್ಮೇಗೌಡ ತಿಳಿಸಿದ್ದಾರೆ.