ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ತ್ಯಾಗ-ಸೇವೆಯ ಪ್ರತೀಕ: ಸಿದ್ಧಲಿಂಗಶ್ರೀ
ತುಮಕೂರು, ಆ. ೧೦- ರೋಟರಿ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷರಾಗಿರುವುದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾಗಿದೆ. ರಾಜೇಶ್ವರಿ ರುದ್ರಪ್ಪ ನವರನ್ನು ಅಧ್ಯಕ್ಷರನ್ನಾಗಿ ಮಾಡಿ ಇತಿಹಾಸ ನಿರ್ಮಿಸಿದ್ದೀರಿ. ಇನ್ನು ಮುಂದೆ ರೋಟರಿಗೆ ಮಹಿಳೆಯರು ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಕ್ಷರಾಗಲಿ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯು ತ್ಯಾಗ ಮತ್ತು ಸೇವೆಯ ಪ್ರತೀಕಳಾಗಿದ್ದು, ಸಮಾಜ ಬಹಳಷ್ಟು ಗೌರವ ಕೊಡುತ್ತಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ಹೇ ಳಿದರು.
ನಗರದ ಬಿ.ಹೆಚ್.ರಸ್ತೆಯ ರೋಟರಿ ಬಾಲಭವನದಲ್ಲಿ ರೋಟರಿ ತುಮಕೂರು ಸೇವಾ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ರೋಟರಿ ಸೇವಾ ಸಂಸ್ಥೆಯು ಒಂದು ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಸಂಘಟಿತ ಸಂಸ್ಥೆಯಾಗಿದೆ. ತನ್ನ ವಿಶಿಷ್ಟ ಸೇವೆಯಿಂದ ಗುರ್ತಿಸಿಕೊಂಡಿದ್ದು, ಸಮಾಜದ ಸಂಕಷ್ಟಗಳ ಕಾಲದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಸ್ಪಂದಿಸುವ ಮೂಲಕ ಸೇವೆ ಸಲ್ಲಿಸುತ್ತಿದೆ. ನೂತನ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ ನವರು ಅಧಿಕಾರಕ್ಕೆ ಬಂದು ಒಂದೇ ಒಂದು ತಿಂಗಳಲ್ಲಿ ೨೭ ಕಾರ್ಯಕ್ರಮಗಳನ್ನು ಮಾಡಿರುವುದು ಶ್ಲಾಘನೀಯ ಎಂದರು.
ಇವರ ಅಧ್ಯಕ್ಷತೆಯ ಅವಧಿಯಲ್ಲಿ ಹೆಚ್ಚು ಹೆಚ್ಚು ಸೇವಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ. ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು. ಮಹಿಳೆಯರು ಮನಸ್ಸು ಮಾಡಿದರೆ ಎಂತಹ ಕಾರ್ಯವನ್ನೂ ಮಾಡಬಲ್ಲರು. ಇನ್ನೊಬ್ಬರಿಗೆ ಉಪಯೋಗವಾಗುವಂತಹ ಕೆಲಸ ಮಾಡಿ, ಅದೇ ನಿಜವಾದ ಸೇವೆ. ಎಲ್ಲವನ್ನೂ ಹೊಂದಿರುವ ಸ್ಥಿತಿವಂತರು ಪರರ ಕಷ್ಟಗಳಿಗೆ ಮಿಡಿಯುವುದು ಹಾಗೂ ಸೇವೆ ಮಾಡುವುದರ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸ್ವಾಮೀಜಿ ಯವರಿಗೆ ರೋಟರಿ ತುಮಕೂರು ವತಿಯಿಂದ ಪಾದಪೂಜೆ ನೆರವೇರಿಸ ಲಾಯಿತು.
ಇದೇ ಸಂದರ್ಭದಲ್ಲಿ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕರಾದ ಡಾ. ಪರಮೇಶ್ ರವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪರಮೇಶ್, ನಾನು ಸಹ ರೋಟರಿ ತುಮಕೂರಿನ ಸದಸ್ಯನಾಗಿದ್ದು, ರೋಟರಿ ಸಂಸ್ಥೆಯ ಎಲ್ಲ ಸೇವಾ ಕಾರ್ಯಗಳಿಗೆ ನಮ್ಮ ಸಹಕಾರವಿದೆ. ರೋಟರಿ ಸಂಸ್ಥೆಯು ಉತ್ತಮವಾದ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ಸಮಾಜದ ಋಣ ತೀರಿಸುವ ಕಾರ್ಯ ಮಾಡುತ್ತಿದೆ ಎಂದು ಪ್ರಶಂಶಿಸಿದರು.
ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಶೀಲಾ ಮಧು, ರೊ. ಕಾಡದೇವರಮಠ, ರೊ. ಬಸವರಾಜ್ ಹಿರೇಮಠ್, ರೊ. ಎಂ.ಎಸ್.ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
ರೋಟರಿ ತುಮಕೂರು ಸಂಸ್ಥೆಯ ಈ ವರ್ಷದ ಅರ್ಲಿಬಡ್ರ್ಸ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಇನ್ನರ್‌ವ್ಹೀಲ್ ಕಾರ್ಯದರ್ಶಿ ರೇಖಾ ಪ್ರಾರ್ಥಿಸಿದರು. ನೂತನ ಅಧ್ಯಕ್ಷೆ ರೋ. ರಾಜೇಶ್ವರಿ ರುದ್ರಪ್ಪ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ನಾಗಮಣಿ ಪ್ರಭಾಕರ್ ವಂದಿಸಿದರು.