ವೈಜ್ಞಾನಿಕ ಬಸವ ಪಂಚಮಿ ಆಚರಣೆ
ಸಂಜೆವಾಣಿ ವಾರ್ತೆ
ಔರಾದ್ : ಆ.೧೦:ನಾಗರ ಪಂಚಮಿ ಧಾರ್ಮಿಕ ಶ್ರದ್ದಾಭಕ್ತಿಯ ಆಚರಣೆಯಾದರೂ ಅದರ ಹೆಸರಲ್ಲಿ ಮೌಢ್ಯತೆಯೊಂದಿಗೆ ಹುತ್ತಕ್ಕೆ ಹಾಲೆರೆಯುವುದು ಒಂದು ಅವೈಜ್ಞಾನಿಕ ಪದ್ಧತಿ. ಇದರ ಬದಲು ಅಪೌಷ್ಟಿಕತೆಯಿಂದ ನರಳುತ್ತಿರುವವರಿಗೆ ಹಾಲನ್ನು ನೀಡಿದರೆ ಹೆಚ್ಚು ಉಪಯುಕ್ತ ಎಂದು ಚಿಂತಕ ಸೂರ್ಯಕಾಂತ ಸಿಂಗೆ ಅಭಿಪ್ರಾಯಪಟ್ಟರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಸವ ಬಾಂಧವ್ಯ ಬಳಗದಿಂದ ಮೌಢ್ಯತೆ, ಕಂದಾಚಾರಗಳನ್ನು ಹೋಗಲಾಡಿಸುವ ದಿಸೆಯಲ್ಲಿ ವೈಜ್ಞಾನಿಕ ಬಸವಪಂಚಮಿ ಆಚರಣೆ ಕೈಗೊಳ್ಳಲಾಯಿತು. ಬಳಿಕ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ, ಗರ್ಭಿಣಿ ಸ್ತ್ರೀಯರಿಗೆ, ಮಕ್ಕಳಿಗೆ ಹಾಲು, ಬ್ರೆಡ್, ಹಣ್ಣು ವಿತರಿಸಿ ಮಾತನಾಡಿದ ಅವರು, ಮಕ್ಕಳು, ಗರ್ಭಿಣಿ ಸ್ತ್ರೀಯರು, ಬಡವರು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.
ಹಬ್ಬದ ಆಚರಣೆಗಳ ಹೆಸರಲ್ಲಿ ಕಲ್ಲು ನಾಗರ, ಹುತ್ತಗಳಿಗೆ ಲಕ್ಷಾಂತರ ಲೀಟರ್ ಹಾಲನ್ನು ಸುರಿಯುವುದು ಮೌಢ್ಯತೆಯಷ್ಟೆ. ಇಂತಹ ಕಂದಾಚಾರಗಳನ್ನು ದೂರಾಗಿಸಿ ವೈಜ್ಞಾನಿಕ ದೃಷ್ಟಿಕೋನವನ್ನು ಜನತೆಯಲ್ಲಿ ಮೂಡಿಸುವುದು ಈ ಬಸವ ಪಂಚಮಿಯ ಉದ್ದೆ?ಶ. ಕಲ್ಲು ನಾಗರ ಹಾಗೂ ಹುತ್ತಗಳಿಗೆ ಸುರಿಯುವ ಹಾಲನ್ನು ಹಾಳು ಮಾಡದೆ ಬೇರೆಯವರ ಉಪಯೋಗಕ್ಕೆ ಬಳಸಿದರೆ ಒಳಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಲ್ಪಪ್ಪ ದೇಶಮುಖ, ಡಾ. ಸಿದ್ದಾರ್ಥ, ಡಾ. ಧನರಾಜ ರಾಗಾ, ಮಲ್ಲಿಕಾರ್ಜುನ ಟಂಕಸಾಲೆ, ಶರಣಪ್ಪ ನಾಗಲಗಿದ್ದೆ, ಜಗನ್ನಾಥ ಮೂಲಗೆ, ಬಸವರಾಜ ಶಟಕಾರ, ಶಿವರಾಜ ಶಟಕಾರ, ಅಮೃತರಾವ ಬಿರಾದಾರ, ಜಗನ್ನಾಥ ದೇಶಮುಖ, ಸಂಗಮೇಶ ಕೂಡ್ಲೆ, ಬಾಲಾಜಿ ಅಮರವಾಡಿ, ಗಜಾನನ ಮಳ್ಳಾ, ಅಂಬಾದಾಸ ನಳಗೆ, ರಾಜಕುಮಾರ ಡೋಣಗಾಪೂರೆ, ರಾಜಕುಮಾರ ಹಲ್ಮಡಗೆ, ಬಾಲಾಜಿ ಕಂಬಾರ, ಬಾಲರಾಜ ಎಂಡೆ ಸೇರಿದಂತೆ ಇನ್ನಿತರರಿದ್ದರು.