ತಾಲ್ಲೂಕಿನಾದ್ಯಂತ ಸಂಭ್ರಮದ ಪಂಚಮಿ ಆಚರಣೆಭುಲಾಯಿ ಪದಗಳು ಹಾಡಿ ಖುಷಿ ಪಟ್ಟ ಮಹಿಳೆಯರು
ಸಂಜೆವಾಣಿ ವಾರ್ತೆ
ಔರಾದ್ : ಆ.೧೦:ಔರಾದ್ ತಾಲೂಕಿನಾದ್ಯಂತ ಪಂಚಮಿ ಹಬ್ಬ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಔರಾದ್ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಹಿಳೆಯರು, ಮಕ್ಕಳು ಭುಲಾಯಿ ಹಾಡುಗಳು ಹಾಡಿ ಸಂಭ್ರಮಿಸಿರುವುದು ಕಂಡು ಬಂತು.
ಭುಲಾಯಿ ಹಾಡುಗಳು ಜಾನಪದ ಪದಗಳಾಗಿವೆ. ಜನರು ಬಾಯಿಂದ ಬಾಯಿಗೆ ಹಾಡುತ್ತ ನಿತ್ಯ ಜೀವನದ ಅನೇಕ ಘಟನೆಗಳು, ಕೌಟುಂಬಿಕ ವಿಷಯ, ಪುರಾಣ ಕಥೆಗಳು, ಐತಿಹಾಸಿಕ ಘಟನೆಗಳು, ರೈತರ ಪರಿಶ್ರಮ, ಕೃಷಿ ಕಾರ್ಯ, ರಾಮ, ಭೀಮ, ಶ್ರಾವಣಕುಮಾರ ಅವರಂತಹ ಮಾದರಿ ವ್ಯಕ್ತಿತ್ವ ಪರಿಚಯ ಮಾಡಿಕೊಡುತ್ತಾರೆ.
ನಾಗರ ಪಂಚಮಿಯAದು ಕೆಲವೆಡೆ ಜೋಕಾಲಿ ಆಡುವುದು ಸಾಮಾನ್ಯವಾಗಿದ್ದರೂ ಪ್ರಸ್ತುತ ಜೋಕಾಲಿ ಆಡುವುದು ಕಡಿಮೆಯಾಗಿದೆ. ಪುರುಷರು ಸಹ ದೇಸಿ ಕ್ರೀಡೆಗಳಾದ ಕಬ್ಬಡ್ಡಿ, ಖೋಖೋ ಅಂತಹ ಆಟಗಳಿಂದ ವಿಮುಖರಾಗಿ ಪಂಚಮಿ ಹಬ್ಬದ ಮೆರುಗು ಕಡಿಮೆಯಾಗಿಸಿದ್ದಾರೆ ಎನ್ನುತ್ತಾರೆ ಹಿರಿಯ ಭುಲಾಯಿ ಪದಗಳ ಹಾಡುಗಾರ್ತಿ ಚಂದ್ರಮ್ಮ ಮುದಾಳೆ.
ವಯಸ್ಸಾದ ಮಹಿಳೆಯರು ಮನೆಯ ಅಂಗಳದಲ್ಲಿ ಕುಳಿತು ಹಾಡಿರುವ ಭುಲಾಯಿ ಹಾಡಿಗೆ ಕೆಲವೆಡೆ ಮಹಿಳೆಯರು ಗುಂಪು ಗೂಡಿ ಹೆಜ್ಜೆ ಹಾಕಿರುವುದು ಕಂಡು ಬಂತು. ಹೊಸ ಬಟ್ಟೆ ತೊಟ್ಟು, ಬಳೆ ಉಟ್ಟು ಕೈತುಂಬ ಮೆಹಂದಿ ಹಚ್ಚಿಕೊಂಡು ಪಂಚಮಿಯAದು ಮಹಿಳೆಯರು ಮತ್ತು ಹೆಣ್ಮಕ್ಕಳು ಪರಸ್ಪರ ಶುಭಾಶಯ ಕೋರಿದರು. ಎಲ್ಲರೂ ಜೊತೆಗೂಡಿ ದೇವಸ್ಥಾನಗಳಿಗೆ, ಹುತ್ತಕ್ಕೆ ತೆರಳಿ ನೈವೇದ್ಯ ಅರ್ಪಿಸಿದರು.
ಆಧುನಿಕತೆಯ ಈ ಕಾಲದಲ್ಲಿ ಎಲ್ಲೆಡ ಮೊಬೈಲ್ ಸೆಲ್ಫಿ ಸಾಮಾನ್ಯವಾಗಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವತಿಯರು, ಹೆಣ್ಮಕ್ಕಳು ತಮ್ಮ ಸ್ನೇಹಿತೆಯರ ಜೊತೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.