ಕಾವ್ಯ ಕ್ಷೇತ್ರದ ರಾಣಿ ಗಜಲ್: ಡಾ. ಯಾಕೊಳ್ಳಿ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧೦:ಗಜಲ್ ಕಾವ್ಯ ಕ್ಷೇತ್ರದ ರಾಣಿಯಾಗಿದೆ. ಸಾಹಿತ್ಯದಲ್ಲಿ ಕಾವ್ಯವನ್ನು ಹೊರತು ಪಡಿಸಿದರೆ ಗಜಲ್‌ನ್ನು ಬರೆಯುವವರ ಮತ್ತು ಪ್ರೀತಿಸುವವರ ಸಂಖ್ಯೆ ಹೆಚ್ಚಾಗಿದೆ. ಉರ್ದು ಗಜಲ್‌ಗಳಿಂದ ಪ್ರಭಾವಿತರಾದ ಶಾಂತರಸರು ಕನ್ನಡದಲ್ಲಿ ಗಜಲ್ ಕಾವ್ಯವನ್ನು ಹೊರತಂದರು. ಸದ್ಯಕ್ಕೆ ಎಂಟು ನೂರರಷ್ಟು ಗಜಲ್ ರಚನಾಕಾರರಿದ್ದಾರೆ. ಜಂಬುನಾಥ ಕಂಚ್ಯಾಣಿ ಅವರ ಗಜಲ್‌ಗಳು ಓದುಗನನ್ನು ಲೌಕಿಕದಿಂದ ಪಾರಮಾರ್ಥಕ್ಕೆ ಕರೆದೊಯುತ್ತವೆ ಎಂದು ಡಾ. ಎಂ.ವಾಯ್. ಯಾಕೊಳ್ಳಿ ಅವರು ಹೇಳಿದರು.
ವಿಜಯಪುರದ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜಂಬುನಾಥ ಕಂಚ್ಯಾಣಿಯವರ ‘ಸುಮ್ಮನೆ’ ಗಜಲ್ ಕೃತಿಯನ್ನು ಪರಿಚಯಿಸಿ ಮಾತನಾಡಿದರು
ಪ್ರೇಮ, ಪ್ರೀತಿ, ವಿರಹ, ನೋವನ್ನು ಬಿಟ್ಟು ಆಧ್ಯಾತ್ಮ ವಿಷಯವನ್ನು ಕುರಿತು ಗಜಲ್ ರಚಿಸಬಹುದೆಂಬುದಕ್ಕೆ ಕಂಚ್ಯಾಣಿ ಅವರ ‘ಸುಮ್ಮನೆ’ ಗಜಲ್ ಸಾಕ್ಷಿಯಾಗಿದೆ ಎಂದು ಅವರು ನುಡಿದರು.
ಹಿರಿಯ ಗಜಲ್‌ಕಾರರಾದ ಪ್ರಭಾವತಿ ದೇಸಾಯಿ ಅವರು ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿ, ತಾತ್ವಿಕ ಚಿಂತನೆಯುಳ್ಳ ಗಜಲ್‌ಗಳು ನಮ್ಮನ್ನು ಅಲೌಕಿಕ ಪ್ರಪಂಚದತ್ತ ಕೊಂಡೊಯ್ಯುತ್ತವೆ ಎಂದು ಹೇಳಿದರು.
ಡಾ. ಎಂ.ಎಸ್. ಮದಭಾವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜಯಪುರದಲ್ಲಿ ಉತ್ತಮ ಗಜಲ್‌ಕಾರರಿದ್ದು, ನಾಡಿನಲ್ಲಿ ಖ್ಯಾತ ನಾಮರಾಗಿದ್ದಾರೆಂದು ಹೇಳಿದರು. ಬಿ.ಎಂ. ಪಾಟೀಲ ಪ್ರಾರ್ಥಿಸಿದರು. ಡಾ. ವಿ.ಡಿ. ಐಹೊಳ್ಳಿ ಸ್ವಾಗತಿಸಿದರು. ಅಮರೇಶ ಸಾಲಕ್ಕಿ ವಂದಿಸಿದರು. ಈರಣ್ಣ ತೊಂಡಿಕಟ್ಟಿ ನಿರೂಪಿಸಿದರು.
ಸಾಹಿತಿಗಳಾದ ಡಿ.ಬಿ. ಭಜಂತ್ರಿ, ಡಾ. ಉಷಾ ಹಿರೇಮಠ, ಇಂದುಮತಿ ಲಮಾಣಿ, ಎಸ್.ಜಿ. ನಾಡಗೌಡರ, ಕಮಲಾ ಮುರಾಳ, ಬಿ.ಆರ್. ಬನಸೋಡೆ, ಮ.ಗು. ಯಾದವಾಡ, ಬಸವರಾಜ ಮನಗೊಂಡ, ಅಜ್ಜು ಕಂಚ್ಯಾಣಿ, ಸುಭಾಸ ಯಾದವಾಡ, ಅಕ್ಕಮಹಾದೇವಿ ಬುರ್ಲಿ, ಡಾ. ಕೃಷ್ಣಕೊಲ್ಹಾರ ಕುಲಕರ್ಣಿ, ಶಾರದಾ ಕೊಪ್ಪ, ಸಂಗಮೇಶ ಬದಾಮಿ, ಶಂಕರಗೌಡ ಪಾಟೀಲ, ವಿಠ್ಟಲ ತೇಲಿ, ಪ್ರಕಾಶ ಮೇತ್ರಿ, ರಾಚಣ್ಣ ಕೊಳ್ಳಿ, ಸೋಮಶೇಖರ ವಾಲಿ ಮುಂತಾದವರು ಉಪಸ್ಥಿತರಿದ್ದರು.