ಹಬ್ಬ, ಆಚರಣೆಗಳು ವೈಚಾರಿಕತೆಯಿಂದ ಕೂಡಿರಲಿ
ಕಲಬುರಗಿ:ಅ.09: ನಾಗರ ಪಂಚಮಿಯಂದು ಅಮೃತಕ್ಕೆ ಸಮನಾದ ಹಾಲು ಮತ್ತು ಆಹಾರವನ್ನು ಕಲ್ಲು, ಮಣ್ಣು ಪಾಲು ಮಾಡುವ ಸಂಪ್ರದಾಯವನ್ನು ಬಿಟ್ಟು, ಅನಾಥ, ಅಸಹಾಯಕ ಮಕ್ಕಳು, ಬಡವರಿಗೆ ನೀಡಬೇಕು. ಜೀವಾತ್ಮದಲ್ಲಿ ದೇವರನ್ನು ಕಾಣುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾದದ್ದು ಅಗತ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಿಂಗ ರಸ್ತೆಯ, ರಾಮತೀರ್ಥ ದೇವಸ್ಥಾನದ ಸಮೀಪವಿರುವ ಕೊಳಗೇರಿಯ ಪ್ರದೇಶದ ಮಕ್ಕಳಿಗೆ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಹಾಲು ಕುಡಿಸಿ ಬಸವ ಪಂಚಮಿ ಆಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.
ಪ್ರತಿವರ್ಷ ನಾಗರ ಪಂಚಮಿ ನೆಪದಲ್ಲಿ ಲಕ್ಷಾಂತರ ಲೀಟರ ಹಾಲನ್ನು ಹುತ್ತಕ್ಕೆ ಮತ್ತು ನಾಗ ಪ್ರತಿಮೆಗಳಿಗೆ ಸುರಿದು ಅನಾವಶ್ಯಕವಾಗಿ ಹಾಳು ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ಇಂದಿಗೂ ಕೂಡಾ ಅನೇಕ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಲನ್ನು ಅನಾವಶ್ಯಕವಾಗಿ ಹಾಳು ಮಾಡಬಾರದು. ವೈಜ್ಞಾನಿಕ ಯುಗದಲ್ಲಿ ಇಂತಹ ಮೂಢನಂಬಿಕೆ ಆಚರಿಸಬಾರದು. ಅಂಧಶೃದ್ಧೆಗಳನ್ನು ಪಾಲಿಸದೆ, ಬಾಲ್ಯದಿಂದಲೇ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಮೂಡಿಸಿದರೆ ಅವರು ಮುಂದೆ ದೊಡ್ಡವರಾದ ಮೇಲೆ ಇಂತಹ ಆಚರಣೆ ಮಾಡಲಾರರು. ಆದ್ದರಿಂದ ಇದರ ಬಗ್ಗೆ ಎಲ್ಲೆಡೆ ಜಾಗೃತಿ ಉಂಟಾಗಬೇಕೆಂದು ಹೇಳಿದರು.
ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ ಹಾಗೂ ಪ್ರದೇಶದ ಮಕ್ಕಳು, ಮಹಿಳೆಯರು ಇದ್ದರು.