ರೈತ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.10: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಪಿಎಂಸಿ ಮತ್ತು ಭೂ ಸುಧಾರಣೆ ಹಾಗೂ ರೈತ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ಹಾಗೂ ಕಾರ್ಪೋರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂದು ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚ್ ಮತ್ತು ಜಂಟಿ ಹೋರಾಟ ಸಮಿತಿಯ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ಶುಕ್ರವಾರ ನಗರದ ಜಯದೇವ ವೃತ್ತದಲ್ಲಿ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಎಂದು ಕ್ವಿಟ್ ಇಂಡಿಯಾ ಚಳುವಳಿ ನಡೆಸಲಾಯಿತು. ಇಂದು ಕಾರ್ಪೋರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂದು ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.ಈ ವೇಳೆ ಕಿಸಾನ್ ಮೋರ್ಚ್ ಜಿಲ್ಲಾ ಸಂಚಾಲಕಹೆಚ್.ಜಿ.ಉಮೇಶ್ ಮಾತನಾಡಿ, ಕಾರ್ಪರೇಟ್ ಕಂಪನಿಗಳು ನಮ್ಮ ದೇಶದ ಸರ್ವ ಸಂಪತ್ತನ್ನ ಲೂಟಿ ಮಾಡಿ ದೇಶವನ್ನು ಬರಡು ಮಾಡಿದ್ದವು. ಇದೀಗ ದೊಡ್ಡ ದೊಡ್ಡ ಕಾರ್ಪರೇಟ್ ಕಂಪನಿಗಳು ಮತ್ತೆ ನಮ್ಮ ದೇಶಕ್ಕೆ ನುಸುಳುತ್ತಿದ್ದು, ರೈತರ ಫಲವತ್ತಾದ ಜಮೀನು ಕಬಳಿಸುವ ಕೆಲಸ ಮಾಡುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ವಿರೋಧಿ ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದರು.ಪ್ರತಿಭಟನೆಗಳು, ಪಾದಯಾತ್ರೆಗಳು ಸಮಾಜದ ಒಳಿತಿಗಾಗಿ ನಡೆಯಬೇಕಿತ್ತು, ಆದರೆ ಪ್ರಸ್ತುತ ನಾನು ಭ್ರಷ್ಟ, ನೀನು ಭ್ರಷ್ಟ ಎಂದು ಹೇಳಿಕೊಳ್ಳುವಲ್ಲಿ ಹೋರಾಟಗಳು ನಡೆಯುತ್ತಿವೆ. ಆಡಳಿತ ಪಕ್ಷ ಹಾಗು ವಿರೋಧ ಪಕ್ಷಗಳು ಕಳ್ಳರೇ ಆಗಿದ್ದಾರೆ. ಆದರೆ ಈ ದೇಶದ ದುಡಿಯುವ ವರ್ಗದ ಜನರಿಗೆ ನೀವು ಎಷ್ಟರ ಮಟ್ಟಿಗೆ ಗಮನಿಸುತ್ತಿದ್ದಿರಿ, ಅವರಿಗೆ ಅವಶ್ಯಕವಾದ ಬಿತ್ತನೆ ಬೀಜ, ಔಷಧಿ, ಗೊಬ್ಬರಗಳನ್ನು ನೀಡಲು ಯಾವ ಕಂಪನಿಗಳನ್ನು ತಂದು ಇಲ್ಲಿ ಸೇರಿಸುತ್ತಿದ್ದಿರಿ ಎಂದು ಪ್ರಶ್ನೆ ಮಾಡಿದರು.ಇತ್ತ ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಯಾವ ಭಾಗದ ಭೂಮಿಗಳಿಗೆ ಯಾವ ಬೆಳೆ ಬೆಳೆಯಬೇಕು ಎಂದು ರೈತರಿಗೆ ಯಾವುದೇ ಮಾಹಿತಿ ನೀಡಿದೆ, ಮಲ್ಟಿ ನ್ಯಾಷನಲ್ ಕಂಪನಿಗಳ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ರೈತ ವಿರೊಧಿಗಳಾಗಿದ್ದಾರೆ. ಇದು ಖಂಡನೀಯ. ಇಂದು ಕ್ವಿಟ್ ಇಂಡಿಯಾ ಚಳುವಳಿ ಭಾಗವಾಗಿ ಮತ್ತೋಮ್ಮೆ ಈ ದೇಶದ ಕಾರ್ಪರೇಟ್ ಕಂಪನಿಗಳು ದೇಶ ಬಿಟ್ಟು ತೆರಳಬೇಕೆಂದು ಒತ್ತಾಯಿಸಿ ಇಂದು ರಾಜ್ಯವ್ಯಾಪ್ತಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಮಧು ತೊಗಲೇರಿ, ಐರಣಿಚಂದ್ರು, ಶ್ರೀನಿವಾಸ್, ಮರುಳಸಿದ್ದಪ್ಪ, ನಾಗಣ್ಣ, ಸತೀಶ್ ಅರವಿಂದ್, ಪವಿತ್ರ, ಬಸವರಾಜ್ ಸೇರಿದಂತೆ ಅನೇಕ ರೈತ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.