ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಶ್ರಮಿಸಿದ ಗೋಕಾಕ್
ಕಲಬುರಗಿ:ಅ.09: ಕವಿ, ಕಾದಂಬರಿಕಾರ, ವಾಗ್ಮಿ, ವಿಮರ್ಶಕ, ಶಿಕ್ಷಣ ತಜ್ಞ, ಪ್ರಾಂಶುಪಾಲ, ಉಪ ಕುಲಪತಿ, ಸಾಂಸ್ಕøತಿಕ ರಾಯಭಾರಿ, ಕನ್ನಡಪರ ಚಳುವಳಿಗಾರರಾಗಿ ಹೀಗೆ ಹಲವು ವಿಧಗಳಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿ, ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಶ್ರಮಿಸಿದ ಡಾ.ವಿ.ಕೃ.ಗೋಕಾಕ್‍ರ ಕೊಡುಗೆ ಅಮೋಘವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಡಾ.ವಿ.ಕೃ.ಗೋಕಾಕರ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
‘ವಿನಾಯಕ’ ಎಂಬ ಕಾವ್ಯನಾಮದಿಂದ ಇವರನ್ನು ಗುರುತಿಸಲಾಗುತ್ತದೆ. ಗೋಕಾಕರ ಸಾಹಿತ್ಯ ಕೃಷಿಗೆ ಬೇಂದ್ರೆಯವರ ಮಾರ್ಗದರ್ಶನ, ಪ್ರೋತ್ಸಾಹ ದೊರೆತಿದೆ. ವಿವಿಧ ದೇಶಗಳಿಗೆ ಭಾರತದ ರಾಯಭಾರಿಯಾಗಿ ತೆರಳಿ ನಮ್ಮ ನಾಡು, ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕನ್ನಡಕ್ಕೆ ಐದನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದ್ದಾರೆ ‘ನವ್ಯ’ತೆಗೆ ಬುನಾದಿ ಹಾಕಿದ್ದಾರೆ. ‘ಭಾರತ ಸಿಂಧು ರಶ್ಮಿ’, ‘ದ್ಯಾವಾ ಪ್ರಥ್ವಿ’ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಗೋಕಾಕರು, ನಾಡು, ನುಡಿ, ಜಲ, ಭಾಷೆಗಾಗಿ ನಿರಂತರವಾಗಿ ಹೋರಾಟ ಮಾಡಿದ್ದಾರೆ. ಗೋಕಾಕರು ತಮ್ಮ ಪಾಂಡಿತ್ಯದಿಂದಾಗಿ ಜನಸಾಮಾನ್ಯರು ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಲು ಪ್ರೇರಣೆ ನೀಡಿದ್ದಾರೆ ಎಂದರು.
ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ ಮಾತನಾಡಿ, ಕನ್ನಡದ ಸಾರ್ವಭೌಮತೆಯ ಬಗ್ಗೆ ವರದಿ ಹೊಂದಿದ್ದ ‘ಗೋಕಾಕ ವರದಿ’ ಜಾರಿಗಾಗಿ ನಮ್ಮ ನಾಡಿನಲ್ಲಿ ಜರುಗಿದ ಕನ್ನಡ ಚಳುವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಏಕೆಂದರೆ ಕರ್ನಾಟಕದಲ್ಲಿ ಇಂತಹ ಬೃಹತ ಪ್ರಮಾಣದ ಚಳುವಳಿ ಹಿಂದೆಂದೂ ಜರಗಿರಲಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕರಾದ ಪ್ರಿಯಾಂಕಾ ದೋಟಿಕೊಳ್ಳ, ನಿಲೊಫರ ಶೇಖ್, ಪೂಜಾ ಜಮಾದಾರ, ಐಶ್ವರ್ಯ ಬಿರಾದಾರ ಹಾಗೂ ವಿದ್ಯಾರ್ಥಿಗಳು ಇದ್ದರು.