ಪೋಲಿಸರು-ಹೋರಾಟಗಾರರ ನಡುವೆ ಮಾತಿನ ಚಕಮಕಿ
ಸಿಂಧನೂರು ಆ.೯- ಸಾರ್ವಜನಿಕ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಬಹು ರಾಷ್ಟ್ರೀಯ ಕಂಪನಿಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಸಮಿತಿ ವತಿಯಿಂದ ಅಂದಿನ ಕ್ವಿಟ್ ಇಂಡಿಯಾ ಚಳುವಳಿ ನೆನಪಿಗಾಗಿ ಇಂದು ಆಗಸ್ಟ್ ೯ ಬಹುರಾಷ್ಟ್ರೀಯ ಕಂಪನಿಗಳ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.
ನಗರದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನೆ ಮೆರವಣಿಗೆ ಅಣಕು ಶವ ಹೊತ್ತೊಯ್ದು ಸಾಗಿ ನಗರದ ಗಾಂಧಿ ವೃತ್ತದಲ್ಲಿ ಅಣಕು ಶವಕ್ಕೆ ಬೆಂಕಿ ಹಚ್ಚಿದರು.ಈ ಸಮಯದಲ್ಲಿ ಪೋಲಿಸರು ರಸ್ತೆ ಮದ್ಯ ಪ್ರತಿಕೃತಿ ದಹನ ಮಾಡಬೇಡಿ ಎಂದು ಎಳೆದಾಡಿದರು ಆದರೂ ಬಿಡದ ಹೋರಾಟಗಾರರು ಪ್ರತಿ ಕೃತಿ ಸುಟ್ಟು ಆಕ್ರೋಶ ಹೊರ ಹಾಕಿದರು. ಕಾರ್ಪೊರೇಟ್ ಕಂಪನಿಗಳ ಜೊತೆ ಕೈ ಜೋಡಿಸುತ್ತಿರುವ ಕೇಂದ್ರ ಸರ್ಕಾರ ಅವರ ಅಣತಿಯಂತೆ ನಿಯಮಗಳನ್ನು ರೂಪಿಸುತ್ತಿದ್ದು ರೈತರ ಬಿತ್ತನೇ ಯಂತ್ರೋಪಕರಣಗಳಿಗಿದ್ದ ಸಬ್ಸಿಡಿ ಕಡಿತಗೊಳಿಸಿದ್ದಾರೆ.ಅಂಬಾನಿ ಅದಾನಿ ,ಟಾಟಾ ,ಬಿರ್ಲಾ ಕಂಪನಿಗಳ ಕೈ ಗೊಂಬೆ ಯಂತೆ ವರ್ತಿಸುತ್ತಿದ್ದಾರೆ. ಎಮ್.ಎಸ್.ಪಿ ಒದಗಿಸಿ ,ರೈತರನ್ನು ಋಣಭಾರ ದಿಂದ ಮುಕ್ತಿಗೊಳಿಸಿ ,ಆತ್ಮಹತ್ಯೆ ಕೊನೆಗೊಳಿಸಿ ,ವಿದ್ಯುತ್ ಖಾಸಗೀಕರಣ ಕೈ ಬಿಡಿ ,ಕೃಷಿಗೆ ಪ್ರತ್ಯೇಕ ಬಜೆಟ್ ಹೊರಡಿಸಿ ,ಗೊಬ್ಬರ ,ಬೀಜ ,ಕೀಟನಾಶಕ ,ವಿದ್ಯುತ್ ಜಿ.ಎಸ್.ಟಿ ರದ್ದುಗೊಳಿಸಿ ,ದೆಹಲಿಯಲ್ಲಿ ಹುತಾತ್ಮರಾದ ರೈತರಿಗೆ ಪರಿಹಾರ ನೀಡಿ ,ಹುತಾತ್ಮ ಸ್ಮಾರಕ ನಿರ್ಮಿಸಿ ಎಂದು ಒತ್ತಾಯಿಸಿದರು.
ಹೋರಾಟದ ಪ್ರಮುಖರಾದ ಚಂದ್ರಶೇಖರ ಗೋರೆಬಾಳ ,ರಮೇಶ ಪಾಟೀಲ್ ಬೇರ್ಗಿ ,ನಾಗರಾಜ ಪೂಜಾರ ,ಶರಣಪ್ಪ ಮರಳಿ ,ರಾಮಯ್ಯ ಜವಳಗೇರಾ ,ಬಿ.ಎನ್ ಯರದಿಹಾಳ ,ಬಸವರಾಜ ಹಸಮಕಲ್ ,ಬಸವರಾಜ ಬೆಳಗುರ್ಕಿ ,ರೇಣುಕಪ್ಪ ಕಲ್ಮಂಗಿ ,ಬಸವರಾಜ ಕೊಂಡಿ ,ಮೌನೇಶ ಜಾಲವಾಡಗಿ ,ಎಸ್ ಎಸ್ ಖಾದರ್ ಸೇರಿದಂತೆ ಹತ್ತಾರು ಹೋರಾಟಗಾರರು ಪ್ರತಿಭಟನೆ ನಡೆಸಿ ತಹಶಿಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.