ವಚನಗಳ ಸಂರಕ್ಷಣೆಗೆ ಅಕ್ಕನಾಗಮ್ಮನವರ ಕೊಡುಗೆ ಅನನ್ಯ
ಕಲಬುರಗಿ:ಅ.09:ಬಸವಣ್ಣನವರ ನೇತೃತ್ವದಲ್ಲಿ ಹನ್ನೆರಡನೇ ಶತಮಾನದಲ್ಲಿ ಜರುಗಿದ ‘ಸಾಮಾಜಿಕ ಕ್ರಾಂತಿ’ ವಿಶ್ವದ ಇತಿಹಾಸ ಪುಟಗಳಲ್ಲಿ ಅದ್ಭುತವಾದದ್ದು. ಇದರಲ್ಲಿ ಅನೇಕ ಶರಣ-ಶರಣಿಯವರು ಅವರ ಜೊತೆಗೂಡು ಶ್ರಮಿಸಿದ್ದಾರೆ. ಸಾಮಾಜಿಕ ಸುಧಾರಣೆಗಾಗಿ ನಿರಂತರವಾಗಿ ತಮ್ಮ ಜೀವನದುದ್ದಕ್ಕೂ ಹೋರಾಡಿದ ವೀರಮಾತೆ ಅಕ್ಕ ನಾಗಮ್ಮನವರು ಮನುಕುಲದ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಾಶವಾಗುತ್ತಿದ್ದ ವಚನಗಳನ್ನು ಸಂರಕ್ಷಿಸುವ ಮೂಲಕ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ವೀರಮಾತೆ ಅಕ್ಕನಾಗಮ್ಮನವರ ಜಯಂತಿ’ಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ನಂತರ ಮಾತನಾಡುತ್ತಿದ್ದರು.
ಅಕ್ಕ ನಾಗಮ್ಮನವರು ರಚಿಸಿದ 15 ವಚನಗಳು ಲಭ್ಯವಾಗಿವೆ. ಅವುಗಳಲ್ಲಿ ಆತ್ಮಾವಲೋಕನಕ್ಕೆ ಸಂಬಂಧಿಸಿದ ವಚನಗಳು ಹೆಚ್ಚಾಗಿವೆ. ಇದಲ್ಲದೇ ವೈಚಾರಿಕತೆ, ಭಕ್ತಿ, ಗುರು, ಲಿಂಗ, ಜಂಗಮ, ಲಿಂಗಾಂಗ ಸಾಮರಸ್ಯ, ಸಂಸ್ಕಾರ, ಆಚಾರ- ವಿಚಾರ ಸೇರಿದಂತೆ ಹೀಗೆ ಸಾಕಷ್ಟು ವಿಷಯಗಳಿಗೆ ಸಂಬಂಧಿಸಿದಂತೆ ಸಮಾಜದ ಬೆಳವಣಿಗೆಗೆ ಪೂರಕವಾದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರ ಸಮಾಜಮುಖಿ ವಿಚಾರಧಾರಗೆ ನೀರೆರೆದು ಪೋಷಿಸಿ ಬೆಳೆಸಿದ ಧೀರ, ವೀರಮಾತೆ ಇವರಾಗಿದ್ದಾರೆಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಶಿಕ್ಷಕರಾದ ಪ್ರಿಯಾಂಕಾ ದೋಟಿಕೊಳ್ಳ, ನಿಲೊಫರ ಶೇಖ್, ಪೂಜಾ ಜಮಾದಾರ, ಐಶ್ವರ್ಯ ಬಿರಾದಾರ ಹಾಗೂ ವಿದ್ಯಾರ್ಥಿಗಳು ಇದ್ದರು.