ಆ.೧೧ ಭಗೀರಥ ಜಯಂತಿ, ಪ್ರತಿಭಾ ಪುರಸ್ಕಾರ
ರಾಯಚೂರು, ಆ.೯- ಜಿಲ್ಲಾ ಭಗೀರಥ ಉಪ್ಪಾರ ಸಂಘದಿಂದ ಆಗಸ್ಟ್ ೧೧ ರಂದು ಶ್ರೀ ಮಹರ್ಷಿ ಭಗೀರಥ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಆದಿರಾಜ ಆದೋನಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಂದು ಬೆಳಿಗ್ಗೆ ೭ ಗಂಟೆಗೆ
ಶ್ರೀ ಮಹರ್ಷಿ ಭಗೀರಥ ಭಾವಚಿತ್ರದ ಮೆರವಣಿಗೆಯನ್ನು ನಗರದ ಉಪ್ಪಾರವಾಡಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳ ಮೂಲಕ ರಂಗಮಂದಿರದ ವೇದಿಕೆಯವರೆಗೆ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಸ್.ಎಲ್.ವೀರೇಶ ಅವರಿಗೆ ಭಗೀರಥ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊಸದುರ್ಗ ಭಗೀರಥ ಪೀಠ ಮಧುರೈ ಶ್ರೀ ಡಾ. ಪುರುಷೋತ್ತಮಾನಂದಪುರಿ ಹಾಗೂ ದೇವದುರ್ಗ ತಾಲ್ಲೂಕಿನ ಮಲದಕಲ್ ನಿಜಾನಂದ ಯೋಗಶ್ರಮ ಪೀಠಾಧ್ಯಕ್ಷ ಶ್ರೀ ಬಸವರಾಜ ರಾಜಗುರುಗಳು ವಹಿಸಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜ ಅವರು ಮಾಡಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಜಿಲ್ಲಾ ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ಎನ್. ಬುಗ್ಗಾರೆಡ್ಡಿ ದೇವನಪಲ್ಲಿ ಅವರು ವಹಿಸಲಿದ್ದಾರೆ. ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ನಿಗಮ ಹಾಗೂ ರಾಜ ಉಪ್ಪಾರ ಸಮಾಜ ಸಂಘದ ಅಧ್ಯಕ್ಷ ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ ಅವರು ಮಹರ್ಷಿ ಭಗೀರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಜಿ.ಕುಮಾರ್ ನಾಯಕ್ ಶಾಸಕ ಶಿವರಾಜ್ ಪಾಟೀಲ್, ಮಾಜಿ ಸಂಸದ ಬಿ.ವಿ.ನಾಯಕ್, ವಿಧಾನಪರಿಷತ್ ಸದಸ್ಯ ಎ. ವಸಂತ್ ಕುಮಾರ, ರಾಜ್ಯ ಉಪರ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ಯು.ವೆಂಕೋಬ, ತಾರನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಾಲ್ ಸುಖಾಣಿ, ಶ್ರೀಕಾಂತ್ ವಕೀಲ ಸೇರಿದಂತೆ ಇತರರು ಗಣ್ಯರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬುಗ್ಗಾರೆಡ್ಡಿ, ಅಮರೇಶ, ಪಾಂಡುರಂಗ, ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.