ಮುಖ್ಯನಾಲೆ ೮(ಬಿ)ಗೆ ನೀರು ಹರಿಸಲು ರೈತರ ಆಗ್ರಹ
ಲಿಂಗಸುಗೂರು:ಆ.೦೯-
ನಾರಾಯಣಪುರ ಬಲದಂಡೆ ಮುಖ್ಯನಾಲೆ ವಿತರಣಾ ನಾಲೆ ಸಂಖ್ಯೆ ೮(ಬಿ)ಗೆ ರೈತರಿಗೆ ಪರಿಹಾರ ನೀಡದೇ ಇರುವುದರಿಂದ ನಾಲೆಗೆ ನೀರು ಬಂದ್ ಮಾಡಿದ್ದು ಕೂಡಲೇ ರೈತರಿಗೆ ಪರಿಹಾರ ನೀಡಿ ರೈತರ ಜಮೀನುಗಳಿಗೆ ನೀರು ಹರಿಸಬೇಕು ಇಲ್ಲದೇ ಹೋದರೆ ರಾಷ್ಟ್ರೀಯ ಹೆದ್ದಾರಿ ೧೫೦(ಎ)ರಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದ ರೈತರು ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕೆಂದು ಆಗ್ರಹಿಸಿ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿಯವರಿಗೆ ಮನವಿ ಸಲ್ಲಿಸಿದರು.
ವಿತರಣಾ ನಾಲೆ ಸಂಖ್ಯೆ ೮(ಎ) ವ್ಯಾಪ್ತಿಯಲ್ಲಿ ಬರುವ ಗೌಡೂರು, ಗೌಡೂರು ತಾಂಡ, ಹೊಸಗುಡ್ಡ, ಹೊಸಗುಡ್ಡ ತಾಂಡ, ಬೆಂಚಲದೊಡ್ಡಿ, ಬೆಂಚಲದೊಡ್ಡಿ ತಾಂಡ, ಪೂಜಾರಿ ತಾಂಡ ಸೇರಿದಂತೆ ೭ ಹಳ್ಳಿಗಳ ಸಾವಿರಕ್ಕೂ ಅಧಿಕ ರೈತರು ವಿತರಣಾ ನಾಲೆ ೮ (ಬಿ) ನೀರು ನಂಬಿ ನೀರಾವರಿ ಬೆಳಗಳ ಬಿತ್ತನೆ ಮಾಡುತ್ತಾರೆ. ಅಲ್ಲದೇ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಸಜ್ಜೆ, ತೊಗರಿ, ಹತ್ತಿ, ಸೂರ್ಯಕಾಂತಿ, ಎಳ್ಳು, ಹೆಸರು ಸೇರಿದಂತೆ ಬಿತ್ತನೆ ಮಾಡಿದ್ದಾರೆ. ಮಳೆ ಕೈಕೊಟ್ಟ ಪರಿಣಾಮ ಬೆಳಗಳು ಬಾಡಿವೆ. ಇದರ ಮದ್ಯೆ ರೈತರಿಗೆ ಗಾಯದ ಮೇಲೆ ಬರೆ ಎಂಬಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ವಿತರಣಾ ನಾಲೆ ಭೂಮಿ ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ನೀಡದೇ ವಂಚನೆ ಮಾಡಿದ್ದಾರೆ. ಇದರಿಂದ ಭೂಮಿ ಕಳೆದುಕೊಂಡ ರೈತರು ಈಗ ನಾಲೆ ನೀರು ಬಂದ್ ಮಾಡಿದ್ದಾರೆ ಎಂದು ಆರೋಪಿಸಿದರು.
ಎಚ್ಚೆತ್ತುಕೊಳ್ಳದ ಅಧಿಕಾರಿ ವರ್ಗ : ಭೂ ಪರಿಹಾರ ನೀಡದೇ ಇರುವುದರಿಂದ ಕಳೆದ ವರ್ಷ ರೈತರು ನಾಲೆಗೆ ನೀರು ಹರಿಯುವುದು ತಡೆದಿದ್ದರು ಆಗ ೭ ಗ್ರಾಮಗಳ ರೈತರು ಸಹಾಯಕ ಆಯುಕ್ತರಿಗೆ ಮೋರೆ ಹೋದಾಗ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಭೆ ಭೂ ಕಳೆದುಕೊಂಡ ರೈತರಿಗೆ ತಿಂಗಳೊಳಗೆ ಭೂ ಪರಿಹಾರ ನೀಡುವಂತೆ ಸೂಚನೆ ನೀಡಿದ್ದರು ಅದರಂತೆ ತಿಂಗಳೊಳಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು ಆದರೆ ಒಂದು ವರ್ಷ ಕಳೆದರೂ ಪರಿಹಾರ ನೀಡದೇ ರೈತರಿಗೆ ವಂಚನೆ ಮಾಡಿದ್ದಾರೆ. ಇದರಿಂದ ಕೂಡಲೇ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ತಕ್ಷಣವೇ ಒಣಗುತ್ತಿರುವ ಬೆಳೆಗೆ ವಿತರಣಾ ನಾಲೆ ೮(ಬಿ)ಯಿಂದ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಹೆದ್ದಾರಿ ತಡೆ ಎಚ್ಚರಿಕೆ : ಕೂಡಲೇ ವಿತರಣಾ ನಾಲೆ ಸಂಖ್ಯೆ ೮(ಎ)ಗೆ ನೀರು ಹರಿಸದೇ ಇದ್ದಲ್ಲಿ, ಅಚ್ಚುಕಟ್ಟು ವ್ಯಾಪ್ತಿಯ ಗೌಡೂರು, ಗೌಡೂರು ತಾಂಡ, ಹೊಸಗುಡ್ಡ, ಹೊಸಗುಡ್ಡ ತಾಂಡ, ಬೆಂಚಲದೊಡ್ಡಿ, ಬೆಂಚಲದೊಡ್ಡಿ ತಾಂಡ ಸೇರಿದಂತೆ ೭ ಹಳ್ಳಿಗಳ ರೈತರೊಂದಿಗೆ ಗೌಡೂರು-ಗುರುಗುಂಟಾ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ಬಂದ್‌ಗೊಳಿಸಿ ಹೋರಾಟ ಮಾಡಲಾಗುವುದು ಈ ವೇಳೆ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಂದರೆ ಅದಕ್ಕೆ ಅಧಿಕಾರಿಗಳ ಹೊಣೆಗಾರರು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಸೀದ್ ಜಮದಾ,ರ ತಿಪ್ಪಣ್ಣ ನಾಯಕ, ಹಂಪಣ್ಣ, ಗೋಪಾಲ ಕಾರಾಬಾರಿ, ರಾಮಯ್ಯ ಮಾನ್ವಿ, ಚಂದ್ರು ಬಡಿಗೇರ, ಯಂಕಪ್ಪ ಸೇರಿದಂತೆ ರೈತರು ಇದ್ದರು.