ವೇತನ ವಿಳಂಬ, ಸಿಎಂಸಿ ಗುತ್ತಿಗೆ ನೌಕರ ಆತ್ಮಹತ್ಯೆ ಯತ್ನ
(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಆ.೯:ಕಳೆದ ೭ ತಿಂಗಳಿನಿಂದಲೂ ವೇತನ ದೊರೆಯದ ಹಿನ್ನೆಲೆಯಲ್ಲಿ ಬೇಸತ್ತ ನಗರಸಭೆ ಗುತ್ತಿಗೆ ನೌಕರ ಎಂದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಆತ್ಮಹತ್ಯೆಗೆ ಯತ್ನಿಸಿದ ನಗರಸಭೆ ಗುತ್ತಿಗೆ ನೌಕರನನ್ನು ಅಸ್ಗರ್‌ಅಲಿ ಎಂದು ಗುರುತಿಸಲಾಗಿದೆ. ಅಸ್ಗರ್‌ಅಲಿ ನಗರಸಭೆಯಲ್ಲಿ ಎಲೆಕ್ಟ್ರೀಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಮಾಸಿಕ ೧೫ ಸಾವಿರ ವೇತನ ಪಡೆಯುತ್ತಿದ್ದ. ಆದರೆ. ಕಳೆದ ೭ ತಿಂಗಳಿನಿಂದಲೂ ಈತನಿಗೆ ನಗರಸಭೆಯಿಂದ ವೇತನ ದೊರೆತಿರಲಿಲ್ಲ ಎನ್ನಲಾಗಿದೆ.
ಒಟ್ಟು ೧ ಲಕ್ಷದವರೆಗೂ ಬಾಕಿ ಇರುವುದಾಗಿ ಆತನ ಪರಿಚಯಸ್ಥರು ಮಾಹಿತಿ ನೀಡಿದ್ದಾರೆ. ನಗರಸಭೆಯಿಂದ ವೇತನ ದೊರೆಯದ ಹಿನ್ನೆಲೆ ಕುಟುಂಬ ನಿರ್ವಹಣೆ ಸಂಕಷ್ಟ ಎದುರಿಸುತ್ತಿದ್ದ ಅಸ್ಗರ್, ವೇತನ ವಿಳಂಬಕ್ಕೆ ಬೇಸತ್ತು ಮನೆಯಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ತಕ್ಷಣ ಅಸ್ಗರ್‌ನನ್ನು ಕುಟುಂಬಸ್ಥರು ನಗರಸ ಭಂಡಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಕ್ರಿಮಿನಾಶಕ ಸೇವಿಸಿರುವ ಮಾಹಿತಿ ತಿಳಿದ ವೈದ್ಯರು ತಕ್ಷಣ ಆತನಿಗೆ ಹೆಚ್ಚಿನ ವೈದ್ಯಕೀಯ ಪರೀಕ್ಷೆ ನಡೆಸಲು ಸೂಚಿಸಿದ್ದಾರೆ. ಪರೀಕ್ಷೆ ವರದಿ ಬಂದ ನಂತರ ಅಗತ್ಯವಿರುದ ಎಲ್ಲ ಚಿಕಿತ್ಸೆಗಳನ್ನು ಕೈಗೊಳ್ಳಲಿದ್ದಾರೆ.