ಹು.ಧಾ.ದಲ್ಲಿ ಪೊಲೀಸ್ ದಾಳಿ16 ಗಾಂಜಾ ಮಾರಾಟಗಾರರ ಬಂಧನ-ಮಾರಕಾಸ್ತ್ರ ವಶ
ಹುಬ್ಬಳ್ಳಿ, ಆ 9: ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಎಷ್ಟೊಂದು ಬಲಿಷ್ಠವಾಗಿ ಬೆಳೆದುನಿಂತಿದೆ ಎಂಬುದು ತೀರ ಇತ್ತೀಚೆಗೆ ಪೊಲೀಸ್ ಇಲಾಖೆಯ ಬಿಸಿ ಮುಟ್ಟುವವರೆಗೂ ನಿರಾತಂಕವಾಗಿಯೇ ವಿಜೃಂಭಿಸಿದ್ದು, ಅದು ಇದೀಗ ಬೆಳಕಿಗೆ ಬರುತ್ತಿದೆ.
ಹುಬ್ಬಳ್ಳಿ ಹಾಗೂ ಧಾರವಾಡಗಳಲ್ಲಿ ಮತ್ತೆ ದಾಳಿ ನಡೆಸಿದ ಪೊಲೀಸರು 16 ಜನ ಗಾಂಜಾ ಮಾರಾಟಗಾರರನ್ನು ಬಂಧಿಸಿ ಅವರಿಂದ ಮಾದಕ ವಸ್ತು ಸೇರಿ ಕಾರು ನಗದು ಹಾಗೂ ಮಾರಕಾಸ್ತ್ರಗಳನ್ನು ವಶಪಸಿಕೊಂಡಿದ್ದಾರೆ.
ಹು-ಧಾ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಹುಬ್ಬಳ್ಳಿಯ ಬೆಂಡಿಗೇರಿ ಠಾಣೆ ವ್ಯಾಪ್ತಿಯ ಕೆ.ಇ.ಬಿ ಗ್ರಿಡ್ ಬಳಿ ನಡೆಸಿದ ದಾಳಿಯಲ್ಲಿ ಓಡಿಸ್ಸಾದ ನೀಲಾಂಬರ ರಾವುತ್, ಕೇಶಬಚಂದ್ರ, ಹಾವೇರಿಯ ತೌಸೀಫ್ ಅಹ್ಮದ್, ಹಳೇಹುಬ್ಬಳ್ಳಿಯ ಪವನ, ಸಿದ್ದಾರ್ಥ, ಮಂಜುನಾಥ, ನದೀಂ, ವಿಠ್ಠಲ, ಶಾನವಾಜ, ಕಮರೀಪೇಟೆಯ ಗಣಪತಸಾ, ಉತ್ತರಾಖಂಡನ ಮಹ್ಮದ ಅಲಿ, ಹಳೇ ಹುಬ್ಬಳ್ಳಿ ಚನ್ನಪೇಟೆಯ ಕಾರ್ತಿಕ ಸೇರಿ ಒಟ್ಟು 12 ಜನರನ್ನು ಬಂಧಿಸಿ ಅವರಿಂದ ಎರಡೂವರೆ ಲಕ್ಷ ರೂ. ಮೌಲ್ಯದ 2.5 ಕೆ.ಜಿ. ಗಾಂಜಾ, ಐದು ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಕಾರು, ಎರೆಡು ತಲವಾರ, ಡ್ರ್ಯಾಗರ್, 10 ಮೊಬೈಲ್‍ಗಳು, ನಗದು ವಶಪಡಿಸಿಕೊಡಿದ್ದಾರೆ.
ಈ ದಾಳಿಯ ಸಂದರ್ಭದಲ್ಲಿ ಕೆಲ ಆರೋಪಿಗಳು ಪರಾರಿಯಾಗಲು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಧಾರವಾಡದ ಕೋಳಿಕೇರಿ ನುಚ್ಚಂಬ್ಲಿಬಾವಿ ಬಳಿ ಗಾಂಜಾ ಮಾರಾಟದ ಸುಳಿವಿನ ಮೇರೆಗೆ ನಡೆಸಿದ ದಾಳಿಯಲ್ಲಿ ಸೊಲ್ಲಾಪುರದ ಸೈಫಲಿ ಸುತಾರ, ಸಂಕೇಶ್ವರ ಹತ್ತಿರದ ಸೊಲ್ಲಾಪುರದ ಸಂಕೇತ್ ಕೋತ್, ಧಾರವಾಡದ ಸಂದೀಪ್ ಸಳಕೆ, ಹಜರತಲಿ ಮಕಾನದಾರ ಎಂಬುವವರನ್ನು ಬಂದಿಸಿ 1942 ಗ್ರಾಂ ಗಾಂಜಾ, 2 ಸ್ಮಾರ್ಟ್ ಫೋನ್, ನಗದು ಇತ್ಯಾದಿ ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್. ಹಾಗೂ ಪೊಲೀಸ್ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಹು-ಧಾ ಮಹಾನಗರದಲ್ಲಿ ಮಾದಕ ವಸ್ತುಗಳ ಜಾಲ ಪತ್ತೆ ಹಾಗೂ ತಡೆಗೆ ನೂತನ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮದ ಬಗ್ಗೆ ಜನತೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.