ಸುಶೀಲನಗರದ  ರೇಣುಕಾ ಬಾವಳ್ಳಿಗೆನಾಟಕ ಅಕಾಡೆಮಿ ಪ್ರಶಸ್ತಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,9- ನಾಟಕ ಅಕಾಡೆಮಿಯ 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಜಿಲ್ಲೆಯ ಸಂಡೂರು ತಾಲೂಕಿನ ಸುಶೀಲನಗರದ  ರೇಣುಕಾ ಬಾವಳ್ಳಿ ಆಯ್ಕೆಯಾಗಿದ್ದಾರೆ.
ಇವರು ತಮ್ಮ ಎಂಟನೇ ವಯಸ್ಸಿನಲ್ಲಿಯೇ ನಾಟ್ಯ ಮಾಡುವ ಮೂಲಕ ರಂಗ  ಪ್ರವೇಶಮಾಡಿ.  1986ರಲ್ಲಿ ಬಿ ಸತಿ ಸಂಸಾರದ ಜ್ಯೋತಿ ಎಂಬ ನಾಟಕದಲ್ಲಿ ಮಗಳ ಪಾತ್ರದ ಮೂಲಕ ರಂಗಭೂಮಿಗೆ  ಪಾದಾರ್ಪಣೆ ಮಾಡಿದರು.
ರತ್ನಮಾಂಗಲ್ಯ, ರೈತ ನಗಲಿಲ್ಲ ಸರ್ಕಾರ ಉಳಿಯಲಿಲ್ಲ, ಹುಚ್ಚರಿರುವರು ತಂಗಿ ಎಚ್ಚರವಿರು, ಗೌರಿ ಗೆದ್ದಳು, ಅಣ್ಣ-ತಂಗಿ, ದಾರಿದೀಪ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ ಕೀರ್ತಿ ಇವರದ್ದು.
ರಕ್ತರಾತ್ರಿ, ಕುರುಕ್ಷೇತ್ರ, ವೀರ ಅಭಿಮನ್ಯು  ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಾದ ಗಂಡುಗಲಿ ಕುಮಾರರಾಮ, ಸಂಗೊಳ್ಳಿರಾಯಣ್ಣ, ಸಿಂಧೂರ ಲಕ್ಷ್ಮಣ ಮತ್ತು ಪೌರಾಣಿಕ ನಾಟಕಗಳಾದ ಹೇಮರೆಡ್ಡಿ ಮಲ್ಲಮ್ಮ, ಜಗಜ್ಯೋತಿ ಬಸವೇಶ್ವರ, ಅಲ್ಲಿಪುರ ಮಹಾದೇವತಾತ ಮುಂತಾದ ನಾಟಕಗಳಲ್ಲಿ ಪೌರಾಣಿಕ ಪಾತ್ರಗಳಲ್ಲೂ ಅಭಿನಯಿಸಿ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.ಬಯಲಾಟದಲ್ಲೂ ತಮ್ಮ ಅಭಿನಯದ ಛಾಪು ಮೂಡಿಸಿದ್ದಾರೆ. 
ತಮಗೆ ಈಗ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿರುವ ಬಗ್ಗೆ ಸನಮತಸ ವ್ಯಕ್ತಪಡಿಸಿದ ಅವರು ಈ ಪ್ರಶಸ್ತಿ ನನ್ನ ಪ್ರೇಕ್ಷಕ ವರ್ಗಕ್ಕೆ ಸಮರ್ಪಣೆ ಎಂದಿದ್ದಾರೆ.