ತಮ್ಮ ಬೇಡಿಕೆಗಳ ಈಡೇರಿಕೆಗೆ ಶಿಕ್ಷಕರ ಆಗ್ರಹ
ಸಂಜೆವಾಣಿ ವಾರ್ತೆ
ಬಳ್ಳಾರಿ,ಆ.9: ತಮ್ಮ ವಿವಿಧ ನ್ಯಾಯಯುತ ಈ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ, ನಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಸಾಂಕೇತಿಕವಾಗಿ ಪ್ರತಿಭಟನೆ ಸೂಚಿಸಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಓ, ಡಿಡಿಪಿಐ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರಗಳನ್ನು ನೀಡುವ ಮೂಲಕ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಕೋರಿದ್ದಾರೆ. ಮನವಿ ಪತ್ರ ದಲ್ಲಿ. ಕಳೆದ ಆರೇಳು ವರ್ಷಗಳಿಂದ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿರುವ ಅವೈಜ್ಞಾನಿಕ ಅಂಶಗಳಿಂದ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅನೇಕ ಬಾರಿ ಮನವಿ ಮಾಡಿ ಸರ್ಕಾರದ, ಸಚಿವರ ಗಮನ ಸೆಳೆದಿದ್ದರೂ ಸ್ಪಂದಿಸಿಲ್ಲ ಎಂದು  ತಿಳಿಸಿದೆ. 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಇದರಿಂದ ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು ಮತ್ತು ಪದವಿ ಪೂರೈಸಿದ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ “ಪದವೀಧರ ಶಿಕ್ಷಕ’ರೆಂದು ಪದನಾಮಿಕರಿಸಬೇಕು. ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪೌಢಶಾಲೆಗೆ ಬಡ್ತಿ ನೀಡುವ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡುವ ಬಗ್ಗೆ ಕೋರಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸಿ.ನಿಂಗಪ್ಪ, ಪ್ರಧಾನ ಕಾರ್ಯದರ್ಶಿ ಗುಂಡಪ್ಪನವರ ನಾಗರಾಜ್ , ಉಪಾಧ್ಯಕ್ಷರುಗಳಾದ ಅಸಂಗಿ ನಾಗರಾಜ, ಕೆ.ಎಸ್.ಮಧುಕುಮಾರಿ, ಖಜಾಂಚಿ ಎಂ.ಬಸವನಗೌಡ, ಸಹ-ಕಾರ್ಯದರ್ಶಿಗಳಾದ ಗೀತಾ.ಜೆ, ಬಿ.ರಾಘವೇಂದ್ರ, ಸಂಘಟನಾ ಕಾರ್ಯ ದರ್ಶಿಗಳಾದ ಎಸ್.ಕೆ.ವೇದಾವತಿ, ಮತ್ತು ಜಯಪ್ರಕಾಶ್ ಸೇರಿದಂತೆ ಇತರೆ ಪ್ರಮುಖರು ಇದ್ದರು.