ವಿಜಯಪುರ ಜಿಲ್ಲೆಯಾದ್ಯಂತ ನಾಗರಪಂಚಮಿ ಹಬ್ಬದ ಸಂಭ್ರಮ
ವಿಜಯಪುರ,ಆ.9:ಜಿಲ್ಲೆಯಾದ್ಯಂತ ಶುಕ್ರವಾರ ನಾಗರಪಂಚಮಿ ಹಬ್ಬವನ್ನು ಮಹಿಳೆಯರು, ಮಕ್ಕಳು ಹುರುಪಿನಿಂದ ಸಡಗರ, ಸಂಭ್ರಮದಿಂದ ಆಚರಿಸಿದರು.
ಪಂಚಮಿ ಬಂತು ಸನೇಕ, ನಮ್ಮಣ್ಣ ಬರಲಿಲ್ಲ ಕರಿಯಾಕ… ಈ ಜನಪದ ಹಾಡಿನಿಂದ ನಾಗರಪಂಚಮಿ ಹಬ್ಬ ಮಹಿಳೆಯರಿಗೆ ಎಷ್ಟೊಂದು ಮಹತ್ವವಿದೆ. ಅಣ್ಣ-ತಂಗಿಯರ ಬಾಂಧವ್ಯ ಗಟ್ಟಿಗೊಳಿಸುವಲ್ಲಿ ಈ ಹಬ್ಬ ಎಷ್ಟು ಪರಿಣಾಮಕಾರಿಯಾಗಿದೆ ಎಂಬುವುದು ತಿಳಿಯುತ್ತದೆ. ನಿಜಕ್ಕೂ ನಾಗರಪಂಚಮಿ ಹಬ್ಬ ಮಹಿಳೆರದ್ದೇ ಎಂದು ಜನಜನಿತವಾಗಿದೆ. ಇಂದು ನಾಗರ ಪಂಚಮಿ ಹಬ್ಬದ ಸಡಗರ, ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮಹಿಳೆಯರು ನಾಗರಪಂಚಮಿ ಹಬ್ಬದ ಸಡಗರ, ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.
ಎಳ್ಳು, ಉಂಡಿ, ಕರಚಿಕಾಯಿ, ಚಕ್ಕಲಿ, ಕರದಂಟು ಇವೇ ಮುಂತಾದ ಕುರುಕುಲ ತಿಂಡಿಗಳನ್ನು ಎಲ್ಲರ ಮನೆಯಲ್ಲಿ ಸಿದ್ಧಪಡಿಸಿ ನೆರೆಹೊರೆಯವರಿಗೆ ವಿನಿಮಯ ಮಾಡಿಕೊಂಡು ನೆರೆಹೊರೆಯವರ ಜೊತೆಗೆ ಬಾಂಧವ್ಯ ವೃದ್ಧಿಸುವ ಹಬ್ಬ ಇದಾಗಿದೆ.
ಬೆಳ್ಳಂಬೆಳ್ಳಗ್ಗೆ ಸ್ನಾನ ಮಾಡಿಕೊಂಡು ಶುಚಿರ್ಭೂತರಾಗಿ ಹೊಸ ಬಟ್ಟೆ ಧರಿಸಿಕೊಂಡು ನಾಗ ದೇವನಿಗೆ ಹಾಲು ಎರೆಯುವ ದೃಶ್ಯ ಸಾಮಾನ್ಯವಾಗಿತ್ತು. ಜೋಕಾಲಿ ಜೀಕುವುದು, ಲಿಂಬೆ ಹಣ್ಣು ದೂರದವರೆಗೆ ಎಸೆಯುವ ಮೂಲಕ ಪಂದ್ಯದಲ್ಲಿ ಸಾಮಥ್ರ್ಯ ಪ್ರದರ್ಶಿಸಿ ಗೆಲ್ಲುವುದು ಇವೇ ವಿವಿಧ ಆಟೋಟಗಳು ಗ್ರಾಮೀಣ ಪ್ರದೇಶದಲ್ಲಿ ಈ ಹಬ್ಬಕ್ಕೆ ಇನ್ನಷ್ಟು ಮೆರಗು ತಂದುಕೊಟ್ಟಿವೆ.