ಜ.29 ರಿಂದ 7ನೇ ಭಾರತೀಯ ಸಂಸ್ಕøತಿ ಉತ್ಸವ
ಕಲಬುರಗಿ:ಆ.9:ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಪ್ರಯುಕ್ತ ವಿಕಾಸ ಅಕಾಡೆಮಿ ಹಾಗೂ ಭಾರತೀಯ ವಿದ್ಯಾ ಕೇಂದ್ರ ಒಳಗೊಂಡಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ 2025ರ ಜ. 29ರಿಂದ ಫೆ.6ರವರೆಗೆ ಕಲಬುರಗಿ-ಸೇಡಂ ರಸ್ತೆಯ ಬೀರನಹಳ್ಳಿ ಸಮೀಪ 7ನೇ ಭಾರತೀಯ ಸಂಸ್ಕøತಿ ಉತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿಕಾಸ ಅಕಾಡೆಮಿ ಸಂಯೋಜಕ ಬಸವರಾಜ ಪಾಟೀಲ್ ಸೇಡಂ ತಿಳಿಸಿದರು.
ಇಲ್ಲಿನ ವಿಕಾಸ ಅಕಾಡೆಮಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಕೃತಿಯಿಂದ ಸಂಸ್ಕøತಿಯೆಡೆಗೆ ಈ ಕಾರ್ಯಕ್ರಮದ ಘೋಷವಾಕ್ಯವಾಗಿದ್ದು, ಬೀರನಹಳ್ಳಿ ಉಪರಸ್ತೆ ಪಕ್ಕದ ಸುಮಾರು 240 ಎಕರೆ ಪ್ರದೇಶದಲ್ಲಿ ಒಂಬತ್ತು ದಿನಗಳ ಉತ್ಸವ ನಡೆಯಲಿದೆ ಎಂದರು.
ಭಾರತ ಒಳಗೊಂಡಂತೆ ಹಲವು ದೇಶಗಳ ಸುಮಾರು 30 ಲಕ್ಷಕ್ಕೂ ಅಧಿಕ ಆಸಕ್ತರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರಕೃತಿ ಕೇಂದ್ರಿತ ವಿಕಾಸ ಚಿಂತನೆಗಳ ರೂವಾರಿ ಕೆ.ಎನ್.ಗೋವಿಂದಾಚಾರ್ಯ ಕನಸಿನ ಈ ಉತ್ಸವವನ್ನು ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ, ದಿ.ಎಲ್.ನಾರಾಯಣರೆಡ್ಡಿ, ಇತ್ತೀಚೆಗೆ ನಿಧನರಾದ ಕೃಷಿ ವಿಜ್ಞಾನಿ ಎಸ್.ಎ.ಪಾಟೀಲ್, ಸ್ವದೇಶಿ ಚಳವಳಿಯ ಮೇರು ವ್ಯಕ್ತಿತ್ವ ರಾಜೀವ್ ದೀಕ್ಷಿತ್ ಅವರಿಗೆ ಸಮರ್ಪಣೆ ಮಾಡಲಾಗುತ್ತದೆ ಎಂದು ವಿವರಿಸಿದರು.
50ಕ್ಕೂ ಅಧಿಕ ಪದ್ಮಶ್ರೀ ಪುರಸ್ಕøತರು ಈ ಒಂಬತ್ತು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ, ಉತ್ಸವದ ಭಾಗವಾಗಿ ನಡೆಯಲಿರುವ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಒಂದು ಲಕ್ಷ ಯೋಗ ಪಟುಗಳು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಕಳೆದ 9 ತಿಂಗಳಲ್ಲಿ 55 ಸಾವಿರ ಜನರಿಗೆ ಒಂದು ಪ್ರಶಿಕ್ಷಣ ನೀಡಲಾಗಿದೆ. ಡಿಸೆಂಬರ್‍ವರೆಗೆ ಒಂದು ಲಕ್ಷ ಗುರಿ ಮುಟ್ಟುವ ವಿಶ್ವಾಸವಿದೆ. ಆಗಸ್ಟ್-ಸೆಪ್ಟೆಂಬರ್‍ನಲ್ಲಿ ಸಮಗ್ರ ಕಲ್ಯಾಣ ಕರ್ನಾಟಕದ 52 ತಾಲೂಕು ಕೇಂದ್ರಗಳಲ್ಲಿ ಜಿಲ್ಲಾ ವಿಭಾಗ ಮಟ್ಟದಲ್ಲಿ 18 ಪ್ರಕಾರದ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಸಾಮಾಜಿಕ-ಸಾಂಸ್ಕøತಿಕ ತಂಡಗಳು ಭಾಗವಹಿಸಲಿವೆ ಎಂದು ಬಸವರಾಜ ಪಾಟೀಲ್ ಸೇಡಂ ಮಾಹಿತಿ ನೀಡಿದರು.
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷರು ಹಾಗೂ ದೇವಾಲಯದ ಪೂಜ್ಯರಾದ ಸದಾಶಿವ ಸ್ವಾಮೀಜಿ ಅವರು ಮಾತನಾಡಿ, ಒಂಬತ್ತು ದಿನಗಳ ಭಾರತೀಯ ಸಂಸ್ಕøತಿ ಉತ್ಸವದ ಯಶಸ್ಸಿಗಾಗಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಎಲ್ಲ ತಾಲೂಕುಗಳಲ್ಲಿ 45 ದಿನಗಳ ಪ್ರವಾಸ ಕೈಗೊಳ್ಳಲಾಗುತ್ತಿದೆ. ಇದೇ ಆ.22ರಿಂದ ಪ್ರವಾಸ ಆರಂಭಿಸಲಾಗುವುದು ಎಂದು ನುಡಿದರು.
21 ವರ್ಷಗಳ ಅಪೂರ್ವ ಯಾತ್ರೆ
ವಿಕಾಸ ಅಕಾಡೆಮಿ ಕಾರ್ಯಾರಂಭ ಮಾಡಿದ ಕಳೆದ 21 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಕರ್ಮಭೂಮಿ ಮಾಡಿಕೊಂಡು ಈವರೆಗೆ ಸುಮಾರು ರೂ.220 ಕೋಟಿಗೂ ಅಧಿಕ ಪ್ರಮಾಣದ ಜನಹಿತ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ ಎಂದು ಹಿರಿಯ ಚಿಂತಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ನುಡಿದರು.
ಈ ಹಿಂದಿನ ಹೈದರಾಬಾದ್-ಕರ್ನಾಟಕದಿಂದ ಹಿಡಿದು ಇಂದಿನ ಕಲ್ಯಾಣ ಕರ್ನಾಟಕದವರೆಗೆ ಅಪೂರ್ವ 21 ವರ್ಷಗಳ ಅಪೂರ್ವ ಇತಿಹಾಸವನ್ನೇ ಸೃಷ್ಟಿಸಲಾಗಿದೆ. ಇದರ ಜೊತೆಗೆ, ಕಲಬುರಗಿ ಕಂಪು (2010), ಕನ್ಹೇರಿ-ಕೊಲ್ಹಾಪುರದಲ್ಲಿ 4ನೇ ಭಾರತೀಯ ಸಂಸ್ಕøತಿ ಉತ್ಸವ (2016), ವಿಜಯಪುರದಲ್ಲಿ 5ನೇ ಭಾರತೀಯ ಸಂಸ್ಕøತಿ ಉತ್ಸವ (2019) ಮತ್ತು ಕೊರೊನಾ ಕಾಲಘಟ್ಟದಲ್ಲಿ ತೆಲಂಗಾಣ ರಾಜ್ಯದ ಕಲ್ವಕುರ್ತಿಯಲ್ಲಿ 6ನೇ ಶೈಕ್ಷಣಿಕ ಭಾರತೀಯ ಸಂಸ್ಕøತಿ ಉತ್ಸವ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಮರಿಸಿದರು.