ಮಾದಿಗ ಸಮುದಾಯದಿಂದ ಆಳಂದನಲ್ಲಿ ವಿಜಯೋತ್ಸವ
ಆಳಂದ:ಆ.9: ಸುಪ್ರೀಂಕೋರ್ಟ್ ನೀಡಿದ ಒಳಮೀಸಲಾತಿ ತೀರ್ಪಿಗೆ ಅಭಿನಂದಿಸಿ ಪಟ್ಟಣದಲ್ಲಿ ಮಾದಿಗ ಸಮಾಜ ಬಾಂಧವರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಅಲ್ಲದೆ ಕೂಡಲೇ ರಾಜ್ಯ ಸರ್ಕಾರವು ಕೋರ್ಟ್ ತೀರ್ಪನು ತುರ್ತಾಗಿ ಅನುಷ್ಠಾನಕ್ಕೆ ತರುವ ಮೂಲಕ ರಾಜ್ಯವು ರಾಷ್ಟ್ರಕ್ಕೆ ಮಾದರಿಯನ್ನಾಗಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಬಸ್ ನಿಲ್ದಾಣ ಮುಂದೆ ಗುರುವಾರ ಸೇರಿದ ಸಂಘಟಕರು ಹಾಗೂ ಮಾದಿಗ ಸಮಾಜ ಬಾಂಧವರು ಸೇರಿ ಪಟಾಕಿ ಸಿಡಿಸಿ ಸಂಭ್ರಮಿಸಿ ಪರಸ್ಪರ ಸಿಹಿ ಹಂಚಿಕೊಂಡು ಮಹನಿಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕೈಗೊಂಡು ಹಲಗೆಯ ವಾದ್ಯಕ್ಕೆ ಸಂಭ್ರಮಿಸಿದರು.
ವಿಜಯೋತ್ಸವ ನೇತೃತ್ವ ವಹಿಸಿದ್ದ ಡಾ. ಬಾಬು ಜಗಜೀವನರಾಮ ಅವರ ಅಭಿಮಾನಿ ಸೈನ್ಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಅಂಬರಾಯ ಎಂ.ಕೆ. ಚಲಗೇರಾ ಅವರು ಮಾತನಾಡಿ, ಒಳ ಮೀಸಲಾತಿ ಕುರಿತು 30 ವರ್ಷಗಳ ಹಿಂದೆ ಮಾದಿಗರು ನಡೆಸಿಕೊಂಡ ಬಂದ ಹೋರಾಟಕ್ಕೆ ಫಲಸಿಕ್ಕಂತಾಗಿದೆ. ಸಮುದಾಯದ ಅನೇಕ ಜನರು ಹೋರಾಟದ ಕಿಚ್ಚನ್ನು ಹೊತ್ತುಕೊಂಡು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಸಮುದಾಯ ನಾಯಕರು ಶ್ರಮದ ಫಲಸಿಕ್ಕಿದೆ ಎಂದು ಅವರು ಸ್ಮರಿಸಿದರು.
ಕರ್ನಾಟಕ ದಲಿತ ಸೇನೆ ರಾಜ್ಯ ಅಂಗವಿಕಲ ಒಕ್ಕೂಟ ಅಧ್ಯಕ್ಷ ಸಿದ್ಧು ಎಲೆನಾವದಗಿ ಅವರು ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ರವರು ಬರೆದಿರುವ ಸಂವಿಧಾನದ ಆಸೆಯಂತೆ ಒಳ ಮಿಸಲಾತಿ ಕಲ್ಪಿಸಿದ್ದು, ಅ.1ರಂದು 7 ಜನರ ನ್ಯಾಯಾಧೀಶರ ಪೀಠ ನೀಡಿದ ತೀರ್ಪು ನೀಡಿದ್ದು, ಧ್ವನಿ ಇಲ್ಲದವರಿಗೆ ಸಮಾಜದ ಕಟ್ಟಕಡೆಯ ಮನುಷ್ಯನಿಗೆ ನ್ಯಾಯ ಸಿಕ್ಕಂತಾಗಿದೆ. ಇದು ನಿಜವಾದ ಸಾಮಾಜೀಕ ನ್ಯಾಯ ಆಗಿದೆ ಎಂದು ಹೇಳಿದರು.
ಅಣ್ಣಾಬಾಹು ಸಾಟೆ ಜಯಂತಿ ಸಮಿತಿ ಅಧ್ಯಕ್ಷ ಮಹೇಂದ್ರ ಲೋಕಂಡೆ, ಲೌಹಿಜಿ ಶಕ್ತಿ ಸೇನೆ ಜಿಲ್ಲಾಧ್ಯಕ್ಷ ಓಂಪ್ರಕಾಶ ಪಾತ್ರೆ, ಸಮಾಜ ಮುಖಂಡ ಮಹಾದೇವ ಪಡಸಾವಳಿ, ತಿಪ್ಪಣ್ಣಾ ಆಳಂದ, ಸುಭಾಷ ಪಾತ್ರೆ, ಸಂಜು ಮಾದನಹಿಪ್ಪರಗಾ, ಯಲ್ಲಾಲಿಂಗ ನಿಂಬರಗಾ, ಚಿದಂಬರಾಯ ಬೋಳಣಿ, ಸಂದೇಶ ಪಾತ್ರೆ, ತಿಪ್ಪಣ್ಣಾ ಕಾಂಬಳೆ, ಕಿಶೋರ ಹತ್ತಾಗಾಳೆ, ಕರಣ ಪಾತ್ರೆ, ಸೇರಿದಂತೆ ಸಮಾಜ ಮುಖಂಡರು ಹಾಗೂ ಸಮಾಜ ಪರ ಬೆಂಬಲಿತ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.