ಎಟಿಎಂ ಕಾರ್ಡ್ ಬದಲಾಯಿಸಿ ನಿವೃತ್ತ ಶಿಕ್ಷಕನ ಬ್ಯಾಂಕ್ ಖಾತೆಯಿಂದ 1.85 ಲಕ್ಷ ಡ್ರಾ
ಕಲಬುರಗಿ,ಸೆ.30-ನಿವೃತ್ತ ಶಿಕ್ಷಕರೊಬ್ಬರ ಎಟಿಎಂ ಕಾರ್ಡ್ ಬದಲಾಯಿಸಿ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 1.85 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅಫಜಲಪುರ ತಾಲ್ಲೂಕಿನ ಮಣೂರ ಗ್ರಾಮದವರಾದ ನಿವೃತ್ತ ಶಿಕ್ಷಕ ಹುಸೇನ್ ಭಾಷಾ ಲಾಡ್ಲೆಸಾಬ್ ವಾಲಿಕಾರ (68) ಅವರು ಈ ಸಂಬಂಧ ಇಲ್ಲಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ನಗರದ ಎಂಎಸ್‍ಕೆ ಮಿಲ್ ಏರಿಯಾದಲ್ಲಿರುವ ಮಗಳ ಮನೆಗೆ ಬಂದಿದ್ದ ಅವರು, ಅನಾರೋಗ್ಯದ ನಿಮಿತ್ತ ಮಾತ್ರೆಗಳನ್ನು ಖರೀದಿ ಮಾಡುವ ಸಲುವಾಗಿ ಅಳಿಯ ಚಾಂದಸಾಬ್ ಅವರನ್ನು ಕರೆದುಕೊಂಡು ಕೇಂದ್ರ ಬಸ್ ನಿಲ್ದಾಣ ಹತ್ತಿರದ ಲಾಡ್ಜ್ ಬಳಿ ಎಟಿಎಂಗೆ ಹೋಗಿ 2 ಸಾವಿರ ರೂ.ಡ್ರಾ ಮಾಡಿಕೊಂಡಿದ್ದಾರೆ. ಈ ವೇಳೆ ಅವರ ಪಕ್ಕದಲ್ಲಿ ನಿಂತಿದ್ದ 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ಎಟಿಎಂ ಮಶೀನ್‍ನಿಂದ ಎಟಿಎಂ ಕಾರ್ಡ್ ತೆಗೆದು ಇವರಿಗೆ ಕೊಟ್ಟಿದ್ದಾನೆ. ಇದಾದ ಐದು ದಿನಗಳ ನಂತರ ಹುಸೇನ್ ಭಾಷಾ ಅವರು ತಮ್ಮೂರಿನಲ್ಲಿರುವ (ಮಣೂರ) ಬ್ಯಾಂಕ್‍ಗೆ ಹಣ ಡ್ರಾ ಮಾಡಿಕೊಂಡು ಬರಲು ಹೋಗಿದ್ದಾರೆ. ಆಗ ಬ್ಯಾಂಕಿನ ಕ್ಯಾಶಿಯರ್ ಇವರ ಬಳಿ ಇದ್ದ ಎಟಿಎಂ ಕಾರ್ಡ್ ನೋಡಿ ಇದು ನಿಮ್ಮ ಎಟಿಎಂ ಕಾರ್ಡ್ ಅಲ್ಲ ಎಂದು ತಿಳಿಸಿದ್ದಾರೆ. ಆಗ ಅವರು ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿಸಿದ್ದು, ಇವರ ಎಟಿಎಂ ಕಾರ್ಡ್ ಬಳಸಿ ಆಳಂದ, ಸೋಲಾಪುರ ಮತ್ತು ಮುಂಬೈಯಲ್ಲಿ ಹಂತ ಹಂತವಾಗಿ 1.85 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.