ಕನ್ನಡ ನಾಮಫಲಕಕ್ಕೆ ಅ. 7 ರ ಗಡುವು
ಬೀದರ್: ಸೆ.30:ನಗರದಲ್ಲಿ ಕನ್ನಡ ನಾಮಫಲಕಗಳ ಅಳವಡಿಕೆಗೆ ಕರ್ನಾಟಕ ರಕ್ಷಣಾ ವೇದಿಕೆ ಅಕ್ಟೋಬರ್ 7 ರ ಗಡುವು ನೀಡಿದೆ.
ಗಡುವಿನೊಳಗೆ ಬೇಡಿಕೆಗೆ ಸ್ಪಂದಿಸದಿದ್ದರೆ ಅಕ್ಟೋಬರ್ 8 ರಂದು ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಎಚ್ಚರಿಸಿದ್ದಾರೆ.
ಅಂಗಡಿ, ಮುಂಗಟ್ಟು, ವಾಣಿಜ್ಯ ಮಳಿಗೆಗಳು ಸೇರಿದಂತೆ ಎಲ್ಲ ರೀತಿಯ ನಾಮಫಲಕಗಳ ಮೇಲ್ಭಾಗದಲ್ಲಿ ಶೇ 60 ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದರೂ, ನಗರದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಬಹುತೇಕ ಖಾಸಗಿ ಆಸ್ಪತ್ರೆ, ಶಾಪಿಂಗ್ ಮಾಲ್, ಹೋಟೆಲ್, ಬಟ್ಟೆ ಅಂಗಡಿ, ಶಿಕ್ಷಣ ಸಂಸ್ಥೆ, ಹಾರ್ಡವೇರ್ ಮೊದಲಾದವುಗಳ ಮೇಲೆ ಆಂಗ್ಲ ಭಾಷೆ ಫಲಕಗಳೇ ರಾರಾಜಿಸುತ್ತಿವೆ. ಜಾಹೀರಾತು, ಸೂಚನಾ ಫಲಕಗಳೂ ಇದಕ್ಕೆ ಹೊರತಾಗಿಲ್ಲ ಎಂದು ದೂರಿದ್ದಾರೆ.
ವೇದಿಕೆ ನಗರದಲ್ಲಿ ಮಾರ್ಚನಲ್ಲಿ ಪ್ರತಿಭಟನೆ ನಡೆಸಿದಾಗ, ನಗರಸಭೆಯವರು ನಾಲ್ಕೈದು ತಿಂಗಳ ಕಾಲಾವಕಾಶ ಕೇಳಿದ್ದರು. ಆದರೆ, ಆರು ತಿಂಗಳಾದರೂ ಈ ದಿಸೆಯಲ್ಲಿ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ನಾಮಫಲಕಕ್ಕೆ ಸಂಬಂಧಿಸಿದಂತೆ ಅಂಗಡಿ ಮುಂಗಟ್ಟುಗಳ ಮಾಲೀಕರ ಸಭೆಯನ್ನೂ ನಡೆಸಿಲ್ಲ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ಕಡೆಗಣಿಸುವುದನ್ನು ಸಹಿಸಲ್ಲ. ಜಿಲ್ಲೆಯ ಎಲ್ಲೆಡೆ ಕನ್ನಡ ನಾಮಫಲಕ ಅಳವಡಿಕೆಗೆ ವೇದಿಕೆ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.