ಶಹೀದ್ ಭಗತ್ ಸಿಂಗ್ 117ನೇ ಜಯಂತಿ ಆಚರಣೆ
ಕಲಬುರಗಿ,ಸೆ.30-ಇಲ್ಲಿನ ಪಂಚಶೀಲ ನಗರದ ನವ ಕರ್ನಾಟಕ ಸಿಕ್ಕಲಿಗರ ಸಮಾಜ ಅಭಿವೃದ್ಧಿ ಸಂಘದ ವತಿಯಿಂದ ಶಹೀದ್ ಭಗತ್ ಸಿಂಗ್ ಅವರ 117ನೇ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶೇಖರ್ ಸಿಂಗ್ ಅವರು ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಪಾತ್ರ ಬಹಳ ಮಹತ್ವದ್ದಾಗಿದೆ. ಬ್ರಿಟಿಷರ ವಿರುದ್ಧ ಎದೆಗುಂದದೆ ಹೋರಾಡಿ ತನ್ನ 23ನೇ ವಯಸ್ಸಿನಲ್ಲೇ ವೀರ ಮರಣ ಹೊಂದಿದ ಧೀಮಂತ ನಾಯಕ ಭಗತ್ ಸಿಂಗ್. ಭಗತ್ ಸಿಂಗ್ ಹುಟ್ಟು ಹೋರಾಟಗಾರ. ಸಾಮಾಜಿಕ ಕ್ರಾಂತಿಕಾರಿ. 1931ರಲ್ಲಿ ತನ್ನ ಗೆಳೆಯರಾದ ರಾಜ್ಗುರು ಮತ್ತು ಸುಖದೇವ ಜೊತೆಗೆ ನೇಣಿಗೆ ಕೊರಳೊಡ್ಡಿದ ವೀರ ಸೇನಾನಿ. ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿದ ವೀರ. ದೇಶಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಧೀರ ಭಗತ್ ಸಿಂಗ್. ಶಹೀದ್ ಭಗತ್ ಸಿಂಗ್ ಅವರ ಆದರ್ಶ ಮತ್ತು ಧೈರ್ಯವನ್ನು ಬೆಳೆಸಿಕೊಂಡು ಅವರ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ತತ್ವಗಳನ್ನು ಎತ್ತಿ ಹಿಡಿಯಬೇಕಿದೆ ಎಂದರು.
ಜಗತ್ ಸಿಂಗ್, ವಿಜಯಕುಮಾರ ಚಿಂಚಸೂರಕರ್, ಮೊಹಮ್ಮದ್ ದರವೇಶು, ದೀಪಕ್ ಸಿಂಗ್, ಎಂ.ಡಿ.ಜಾಗಿರದಾರ, ಕಪೂರ್ ಸಿಂಗ್, ಶಾನ್ ಸಿಂಗ್, ಬಂಡು ಪಟನಾಯಕ್, ಮನೋಜಕುಮಾರ, ಶೋನು ಸಿಂಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.