ನೂತನ ಅನುಭವ ಮಂಟಪ ಅಂತರಾಷ್ಟ್ರೀಯ ಧಾರ್ಮಿಕ ಕೇಂದ್ರವಾಗಲಿ: ಸಚಿವ ಖಂಡ್ರೆ
ಬಸವಕಲ್ಯಾಣ: ಸೆ.30:12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ, ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಪೂಣ್ಯ, ಪಾವನ ಭೂಮಿ ಬಸವಕಲ್ಯಾಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿಯ ವಿಶ್ವ ಬಸವ ಧರ್ಮ ಟ್ರಸ್ಟ್ ವತಿಯಿಂದ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನಿಮಿತ್ಯ ಭಾನುವಾರ ಅನುಭವ ಮಂಟಪದ ಪರಿಸರದಲ್ಲಿ ಹಮ್ಮಿಕೊಂಡ ಪೂರ್ವಬಾವಿ ಸಭೆಯಲ್ಲಿ ಮಾತನಾಡಿ, ಬಸವಾದಿ ಶಿವಶರಣರ ತತ್ವಾದರ್ಶಗಳು ವಿಶ್ವಕ್ಕೆ ಬೆಳಗಲಿ ಎಂಬ ಸದುದ್ದೇಶದಿಂದ ಅನುಭವ ಮಂಟಪಪದಲ್ಲಿ ಪ್ರತಿ ವರ್ಷ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಬಸವ ತತ್ವ ಬಹಳ ವೇಗವಾಗಿ ಬೆಳೆಬೇಕಿತ್ತು ಆದರೆ ಪಟ್ಟಭದ್ರ ಹಿತಾಸಕ್ತಿಗಳಿಂದ ಇದಕ್ಕೆ ಹಿನ್ನಡೆಯಾಗಿದೆ ಎಂದ ಅವರು ಬಸವ ತತ್ವವನ್ನು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಸಂವಿಧಾನದ ರೂಪದಲ್ಲಿ ಜಾರಿಗೆ ತರಲಾಗಿದೆ. ಆದರೂ ಸಹ ಸಮಾಜದಲ್ಲಿನ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಈ ಎಲ್ಲಾ ಸಮಸ್ಯೆಗಳು ದೂರ ಆಗಬೇಕಾದರೆ ಬಸವ ತತ್ವ ಒಂದೇ ಮಾರ್ಗವಾಗಿದೆ ಎಂದು ಹೇಳಿದರು.
ನೂತನ ಅನುಭವ ಮಂಟಪ ನಿರ್ಮಾಣ ಆಗುತ್ತಿದೆ. ಈ ಅನುಭವ ಮಂಟಪ ರಾಜ್ಯ, ರಾಷ್ಟ್ರಕ್ಕೆ ಸೀಮಿತಗೊಳ್ಳದೆ ಇದು ಅಂತರಾಷ್ಟ್ರೀಯ ಧಾರ್ಮಿಕ ಕೇಂದ್ರವಾಗಬೇಕು ಎಂಬ ನಿಟ್ಟಿನಲ್ಲಿ ನಿರ್ಮಿಸಲಾಗುತ್ತಿದೆ. ಈ ಕಟ್ಟಡದಲ್ಲಿ ಗುಣಮಟ್ಟತೆ ಕಾಪಾಡಿಕೊಳ್ಳಬೇಕು ಸಾವಿರಾರು ವರ್ಷ ಬಾಳಿಕೆ ಬರಬೇಕು ಎಂದು ಸಂಬಂಧಿತರಿಗೆ ಸೂಚನೆ ನೀಡಲಾಗಿದೆ. 2025ಕ್ಕೆ ಪೂರ್ನಗೊಳಿಸಿ ನಾಡಿಗೆ ಲೋಕಾರ್ಪಣೆಗೊಳಿಸಲಾಗುವದು ಎಂದು ಭರವಸೆ ನೀಡಿದರು.
ನವೆಂಬರ 23 ಹಾಗೂ 24 ರಂದು ಆಚರಿಸಲು ನಿರ್ಧರಿಸಲಾಗಿರುವ 45ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವವು ಎಲ್ಲರೂ ಸೇರಿ ಸಡಗರ ಸಂಭ್ರಮದಿಂದ ಆಚರಿಸೋಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಸುಧಾ ಮೂರ್ತಿ, ರಾಹುಲ್ ದ್ರಾವೀಡ್, ಪವನ ಕಲ್ಯಾಣ ಸೇರಿದಂತೆ ಗಣದ್ಯರಿಗೆ ಅವ್ಹಾನಿಸಲಾಗುವದು. ಹೆಚ್ಚಾಗಿ ಇದರಲ್ಲಿ ಯುವರು ಪಾಲ್ಗೊಳ್ಳುವ ಮೂಲಕ ಬಸವ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗಲಿ ಎಂದು ಹೇಳಿದರು.
ಹುಲಸೂರನ ಡಾ. ಶಿವಾನಂದ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ಕಾಯಕ ಭೂಮಿಯಾದ ಬಸವಕಲ್ಯಾಣ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾದರೆ ಬಸವಕಲ್ಯಾಣವನ್ನು ಜಿಲ್ಲಾ ಕೇಂದ್ರವಾಗಿ ಮಾಡಬೇಕು ಈಗಾಗಲೇ ಜಿಲ್ಲೆಯಲ್ಲಿ ಎಂಟು ತಾಲೂಕುಗಳಿದ್ದು ಬಸವಕಲ್ಯಾಣಕ್ಕೆ ನಾಲ್ಕು ತಾಲೂಕುಗಳು ಸೇರಿಸಿ ಜಿಲ್ಲಾ ಕೇಂದ್ರವಾಗಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಅವರಿಗೆ ಸಲಹೆ ನೀಡಿದರು.
ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಲಿಂ. ಚನ್ನಬಸವ ಪಟ್ಟದ್ದೇವರು ಅಂದು ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸಿ ಕಲ್ಯಾಣಕ್ಕೆ ಬೆಳಕು ನೀಡಿದರು. ಅಲ್ಲದೆ ನೂತನ ಅನುಭವ ಮಂಟಪ ನಿರ್ಮಿಸಲು ಡಾ. ಬಸವಲಿಂಗ ಪಟ್ಟದ್ದೇವರು ಸತತವಾಗಿ ಶ್ರಮಿಸಿದ ಫಲವಾಗಿ ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ಹೀಗಾಗಿ ಲಿಂಗಾಯತ ಧರ್ಮಿಯರಿಗೆ ಬಸವಕಲ್ಯಾಣ ಧರ್ಮ ಕೇಂದ್ರವಾಗಿ ಬೆಳೆಯಲಿ ಬೆಳೆಯಲು ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವವೇ ಕಾರಣ ಈ ಕಾರ್ಯಕ್ರಮಕ್ಕೆ ಬಸವ ಭಕ್ತರು ತನು, ಮನ, ಧನ ಸಹಾಯ ಮಾಡಿ ಶ್ರಮಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಡಾ. ಬಸವಲಿಂಗ ಪಟ್ಟದ್ದೇವರು, ಡಾ. ಗಂಗಾಂಬಿಕಾ ಅಕ್ಕ, ಜಗದ್ಗುರು ಶ್ರೀ ಸಿದ್ರಾಮೇಶ್ವರ ಸ್ವಾಮೀಜಿ, ಶಾಸಕ ಶರಣು ಸಲಗರ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಎಮ್‍ಎಲ್‍ಸಿ ವಿಜಯಸಿಂಗ್, ಮೀನು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ, ಧನರಾಜ ತಾಳಂಪಳ್ಳಿ, ಭಾರತಬಾಯಿ ಶೇರಿಕಾರ, ಡಾ. ಎಸ್.ಬಿ ದುರ್ಗೆ, ಶಿವರಾಜ ನರಶೆಟ್ಟೆ, ಮೀರ ಅಜರಲಿ ನವರಂಗ ಉಪಸ್ಥಿತರಿದ್ದರು.
ಲೋಕಾರ್ಪಣೆಗೊಂಡ ಬಳಿಕ ನೂತನ ಅನುಭವ ಮಂಟಪದಲ್ಲಿ ಅಧಿವೇಶನ ನಡೆಸಲು ಶ್ರೀಗಳ ಒತ್ತಾಯ
ನೂತನ ಅನುಭವ ಮಂಟಪ ನಾಡಿಗೆ ಲೋಕಾರ್ಪಣೆಗೊಂಡ ಬಳಿಕ ಅನುಭವ ಮಂಟಪದಲ್ಲಿ ಒಂದು ಬಾರಿ ಅಧಿವೇಶನ ನಡೆಸಲು ಸರಕಾರದ ಮಟ್ಟದಲ್ಲಿ ಬೇಕಾದ ಕ್ರಮಕೈಗೊಳ್ಳಬೇಕು ಹಾಗೂ ಬಸವಕಲ್ಯಾಣದಲ್ಲಿ 29 ಗವಿಗಳು ಅಭಿವೃದ್ದಿ ಪಡಿಸಲು ಸರಕಾರ ಮುಂದಾಗಿದ್ದು ಆ ಸ್ಥಳಗಳನ್ನು ಕಂದಾಯ ಇಲಾಖೆಯಿಂದ ಬಿಕೆಡಿಬಿಗೆ ಹಸ್ತಾಂತರಿಸಲು ಕ್ರಮಕೈಗೊಳ್ಳಬೇಕು ಎಂದು ಅನುಭವ ಮಂಟಪದ ಅಧ್ಯಕ್ಷ ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಸಚಿವ ಈಶ್ವರ ಖಂಡ್ರೆಗೆ ಒತ್ತಾಯಿಸಿದರು.
ಬಸವಕಲ್ಯಾಣ ಸರಕಾರಿ ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಇತ್ತೀಚಿಗೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ನಿರ್ಣಯಿಸಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಬಸವಕಲ್ಯಾಣಕ್ಕೆ ಅಂತರಾಷ್ಟ್ರೀಯ ಕೇಂದ್ರವಾಗುವ ನಿಟ್ಟಿನಲ್ಲಿ ಹುಮನಾಬಾದ ಮೂಲಕ ರೈಲ್ವೆ ಲೈನ್ ತರಲು ಬೇಕಾದ ತಯ್ಯಾರಿ ಮಾಡಿಕೊಳ್ಳುವಂತೆ ಸಂಸದ ಸಾಗರ ಖಂಡ್ರೆ ಅವರಿಗೆ ತಿಳಿಸಿರುವೆ.
ಅನುಭವ ಮಂಟಪದಲ್ಲಿ 650 ಕೋಟಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿರುವ ಬಸವ ಭಕ್ತರ ಕನಸು ಸಾಕಾರಗೊಳ್ಳುತ್ತಿದೆ. ಲೋಕಾರ್ಪಣೆ ವೇಳೆಯಲ್ಲಿ ನಾಡಿನ ದೊಡ್ಡ ವ್ಯಕ್ತಿಗಳನ್ನು, ಸಂತರನ್ನು ಅವ್ಹಾನಿಸಬೇಕು ಮತ್ತು ನೂತನ ಅನುಭವ ಮಂಟಪದ ಜೊತೆಗೆ ಸರಕಾರ ಪರುಷಕಟ್ಟೆ ಅಭಿವೃದ್ದಿಕೈಗೊಳಿಸಲು ಮುಂದಾಗಬೇಕು
ಶರಣು ಸಲಗರ ಶಾಸಕರು ಬಸವಕಲ್ಯಾಣ