ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ; ಮಂಜುಳಾ ಭೀಮರಾವ್
ಕಲಬುರಗಿ ;ಆ.9: ಪಕ್ಷಿಗಳನ್ನು ಉಳಿಸುವುದರ ಜೊತೆಗೆ ಪರಿಸರ ಸಂರಕ್ಷಣೆ ಮಾಡುವುದು ಸಹ ನಮ್ಮೆಲ್ಲರ
ಆದ್ಯ ಕರ್ತವ್ಯವಾಗಿದೆ ಎಂದು ಸುಂದರ ಬರವಣಿಗೆಯ ತರಬೇತುದಾರರು ಹಾಗೂ ನಿವೃತ್ತ ಮುಖ್ಯೋ ಪಾಧ್ಯಾಯಿನಿಯರಾದ ಮಂಜುಳಾ ಭೀಮರಾವ್ ಅವರು ತಿಳಿಸಿದರು.
ನಗರದ ಆದರ್ಶ ನಗರದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿರುವ “ನಿಮಗಾಗಿ ನಮ್ಮನ್ನು ಉಳಿಸಿ ಪಕ್ಷಿಗಳ ವಿಸ್ಮಯ ಲೋಕ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪರಿಸರದ ಉಳಿವಿಗಾಗಿ ವಿದ್ಯಾರ್ಥಿಗಳಿಗೆ ಪಕ್ಷಿಗಳ ಮಹತ್ವವನ್ನು ತಿಳಿಸಲು 50 ಕ್ಕೂ ಹೆಚ್ಚು ಪಕ್ಷಿಗಳ ಚಿತ್ರಗಳನ್ನು ಪ್ರದರ್ಶನ ಮಾಡುವುದರೊಂದಿಗೆ ಅವುಗಳ ಜೀವನ ಚರಿತ್ರೆಯನ್ನು ಮತ್ತು ವಿಶೇಷತೆಯನ್ನು ಕೂಲಂಕುಶವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಆರೋಗ್ಯಕರ ಪರಿಸರ ವ್ಯವಸ್ಥೆಯಲ್ಲಿ ಪಕ್ಷಿಗಳು, ಆಹಾರ ಸರಪಳಿ ಮತ್ತು ಆಹಾರ ಜಾಲದ ಪ್ರಮುಖವಾದ ಘಟಕವಾಗಿದೆ. ಹೂವುಗಳ ಪರಾಗ ಸ್ಪರ್ಶದ ಮೂಲಕ ಹೊಸ ಬೀಜಗಳ ಉತ್ಪತ್ತಿ, ಬೀಜ ಪ್ರಸಾರ, ಕಳೆ ನಿರ್ವಹಣೆ, ಕೀಟಗಳ ನಿರ್ವಹಣೆ , ಪರಿಸರದ ಶುಚಿ ಕಾರಕಗಳಾಗಿ, ಪರಿಸರದ ಅಪಾಯ ಸೂಚಕಗಳಾಗಿ, ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಮಂಜುಳಾ ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಪ್ರತಿಮಾ ದೇವೂರ, ಸಹ ಶಿಕ್ಷಕರುಗಳಾದ ಶಿವಲೀಲಾ, ಶಶಿಕಲಾ, ವಿಜಯಲಕ್ಷ್ಮಿ, ವಿದ್ಯಾವತಿ, ಲಕ್ಷ್ಮಿ, ಸುರೇಖಾ, ಅಮೋಘಪ್ಪ, ರಾಮಣ್ಣ, ಮಲ್ಲಿಕಾರ್ಜುನ, ದತ್ತಾತ್ರೇಯ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.