ಪಿಎಸ್‍ಐ ಪರಶುರಾಮ ಸಾವಿನ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ
ಆಳಂದ:ಆ.9: ಪಟ್ಟಣದಲ್ಲಿ ದಲಿತ ಸೇನೆ (ಆರ್) ಕಾರ್ಯಕರ್ತರು ಈಚೆಗೆ ಯಾದಗಿರಿ ಪಿಎಸ್‍ಐ ಪರಶುರಾಮ ಅವರ ಸಾವಿನ ಕುರಿತಾದ ನಿಷ್ಪಕ್ಷಪಾತ ತನಿಖೆ ಕೈಗೊಂಡು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ಸಿಯುಕೆ ಕುಲಪತಿಗಳು ಸೇರಿ ಹಲವರ ಮೇಲೆ ಪ್ರಕರಣ ದಾಖಲಾಗಿದ್ದು ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಬಸ್ ನಿಲ್ದಾಣ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ತಹಸೀಲ್ದಾರ ಅವರ ಪರ ಸ್ಥಳಕ್ಕೆ ಆಗಮಿಸಿದ್ದ ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ ಮೂಲಕ ಸರ್ಕಾರಕ್ಕೆ ಬೇಡಿಕೆಯ ಮನವಿ ಸಲ್ಲಿಸಿದರು.
ಪಿಎಸ್‍ಐ ಪರಶುರಾಮ ಅವರ ಸಾವಿಗೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಕಾನೂನು ಕ್ರಮ ಜರುಗಿಸಬೇಕು. ಕುಟುಂಬಕ್ಕೆ ರಕ್ಷಣೆ ನೀಡಿ ಅಗತ್ಯ ಎಲ್ಲ ಪರಿಹಾರಗಳನ್ನು ಒದಗಿಸಬೇಕು. ಮುಂದೆ ಇಂಥ ಘಟನೆಗಳು ಮರುಕಳುಹಿಸದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು.
ವಿಸಿ ಬಂಧನಕ್ಕೆ ಒತ್ತಾಯ:
ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿವಿನಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ದಲಿತ ವಿದ್ಯಾರ್ಥಿ ನಂದಪ್ಪ ಪರಮಣ್ಣಾ ಅವರನ್ನು ದ್ವಾರದಲ್ಲೇ ತಡೆದು ಜಾತಿ ನಿಂಧನೆ ಮಾಡಿರುವ ಕುಲಪತಿಗಳು ಮತ್ತು ಪ್ರೋಪೆಸರ್ ಅವರ ಮೇಲೆ ಕೇಸುದಾಖಲಾಗಿದ್ದು ಕೂಡಲೇ ಅವರನ್ನು ಬಂಧಿಸಿ ವಿಶ್ವ ವಿದ್ಯಾಲಯದಲ್ಲಿ ಆಗುತ್ತಿರುವ ಅನಾಹುತಗಳನ್ನು ತಡೆಗಟ್ಟಬೇಕು ಎಂದು ರಾಜ್ಯದ ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಗ್ರೇಡ್-2 ತಹಸೀಲ್ದಾರ ಅವರ ಮೂಲಕ ಸಲ್ಲಿಸಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಸೇನೆ ಆರ್ ಮುಖಂಡ ಮಲ್ಲಿಕಾರ್ಜುನ ಬೋಳಣಿ, ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ಬಾಬುರಾವ್ ಅರುಣೋದಯ, ಗ್ರಾಪಂ ಸದಸ್ಯ ದಲಿಪ ಮಂಟಗಿ, ಮಹಾದೇವ ಕಾಂಬಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಪ್ರಮುಖ ಪಾಂಡು ಹಿತ್ತಲಶಿರೂರ, ಸೇನೆ ಅಧ್ಯಕ್ಷ ಧರ್ಮಾ ಬಂಗರಗಾ, ಲಕ್ಷ್ಮಣ ಸಂಗೋಳಗಿ, ಸಂದೀಪ್ ಆಯಾಜಂಗಲ್, ಶಶಿಕಾಂತ ಮುನ್ನೊಳ್ಳಿ, ಕೃಷ್ಣಪ್ಪ ರಂಜುಣಗಿ, ಶಾಂತಪ್ಪ ಜಿಡಗಾ, ಮಂಜು ಸಿಂಗೆ, ಅಶೋಕ ಮೋಘಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಿಎಸ್‍ಐ ಭೀಮಾಶಂಕರ ಬಂಕ್ಲಿ ಮತ್ತವರ ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದರು.