ಶ್ರಾವಣ ಮಾಸದಾದ್ಯಂತ ಬಿಲ್ವಪತ್ರಿ ಸಸಿಗಳ ವಿತರಣೆ ಅಭಿಯಾನ
ಬೀದರ:ಆ.9: 70 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಬಂದ ಶ್ರಾವಣ ಮಾಸದ ಆರಂಭವು ಶುಭ ಸೋಮವಾರ ಆಗಿದ್ದು, ಮುಕ್ತಾಯವು ಕೂಡ ಶುಭ ಸೋಮವಾರವೇ ಆಗುತ್ತಿರುವುದು ಮಹತ್ವ ಪೂರ್ಣ ಘಟನೆಯಾಗಿದೆ ಎಂದು ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರಾದ ವೀರಭದ್ರಪ್ಪ ಉಪ್ಪಿನರವರು ಅಭಿಪ್ರಾಯ ಪಟ್ಟರು. ಅವರು ಇಂದು ಬೀದರ-ಔರಾದ ರಸ್ತೆಯಲ್ಲಿರುವ ಮರ್ಕಲ ಗ್ರಾಮದ ಹತ್ತಿರದ ದ್ವಾರಕಾ ನಗರದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಶ್ರಾವಣ ನಿಮಿತ್ಯ ವಿಶೇಷ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಆಸ್ತಿಕರು ಹಾಗೂ ನಾಸ್ತಿಕರು ಎಲ್ಲರೂ ಶ್ರಾವಣ ಮಾಸದಲ್ಲಿ ಭಕ್ತಿಯಲ್ಲಿ ಮಿಂದೆಳುತ್ತಾರೆ. ಹೆಚ್ಚಿನ ಜನರು ಪವಿತ್ರ ಹಾಗೂ ಪುಣ್ಯಕ್ಷೇತ್ರಗಳ ದರ್ಶನವನ್ನು ಪಡೆಯುವ ಮೂಲಕ ಧನ್ಯರಾಗುತ್ತಾರೆ ಎಂದು ತಿಳಿಸಿದರು.
ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಅವರು ಮಾತನಾಡಿ, ಬಿಲ್ವಪತ್ರಿ ಗಿಡವು ಶಿವನಿಗೆ ಪ್ರಿಯವಾಗಿದ್ದು ಅದು ಔಷಧೀಯ ಗುಣವನ್ನು ಸಹ ಹೊಂದಿದೆ ಎಂದು ನುಡಿದರು.
ದೇವಸ್ಥಾನದ ಮುಖ್ಯ ಆರ್ಚಕರು ಪೂಜೆಯನ್ನು ನೆರವೇರಿಸಿದರು. ಬಿಲ್ವಪತ್ರಿ ಸಸಿಗೆ ಪೂಜೆ ಸಲ್ಲಿಸಿ, ನೀರೆ ರೆದು, ನೆರೆದ ಭಕ್ತಾದಿಗಳಿಗೆ ಸಸಿಗಳನ್ನು ವಿತರಿಸಲಾಯಿತು. ಮಹಾರಾಷ್ಟ ಹಾಗೂ ತೆಲಂಗಾಣ ರಾಜ್ಯದ ಅನೇಕ ಭಕ್ತರು ಸಾಯಿಬಾಬಾ ದರ್ಶನ ಪಡೆದರು.