ಬಂಗಾರಪೇಟೆ ಸಿವಿಲ್ ನ್ಯಾಯಾಧೀಶರಿಗೆ ಬೀಳ್ಕೊಡುಗೆ
ಕೋಲಾರ,ಆ,೯-ನ್ಯಾಯ ನಿರ್ಣಯದಲ್ಲಿ ವಕೀಲರ ಪಾತ್ರ ಅತಿ ಪ್ರಮುಖವಾಗಿದ್ದು, ವೃತ್ತಿ ನೈಪುಣ್ಯತೆ ರೂಢಿಸಿಕೊಳ್ಳಲು ನಿರಂತರ ಅಧ್ಯಯನ ಅಗತ್ಯವಿದೆ ಎಂದು ಬಂಗಾರಪೇಟೆಯ ಸಿವಿಲ್ ನ್ಯಾಯಾಧೀಶರಾಗಿದ್ದು, ಇದೀಗ ಪದೋನ್ನತಿ ಹೊಂದಿ ಬೆಂಗಳೂರಿಗೆ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ವರ್ಗಾವಣೆಯಾಗಿರುವ ಬಿ.ಕೇಶವಮೂರ್ತಿ ಕರೆ ನೀಡಿದರು.
ಬಂಗಾರಪೇಟೆ ಸಿವಿಲ್ ನ್ಯಾಯಾಧೀಶರಾಗಿದ್ದು, ಇದೀಗ ಬೆಂಗಳೂರಿಗೆ ಪದೋನ್ನತಿ ಪಡೆದು ಸೀನಿಯರ್ ಸಿವಿಲ್ ಜಡ್ಜ್ ಆಗಿ ವರ್ಗಾವಣೆಗೊಂಡಿರುವ ಅವರನ್ನು ಬಂಗಾರಪೇಟೆ ತಾಲ್ಲೂಕು ವಕೀಲರ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟ ಸಂದರ್ಭದಲ್ಲಿ ಮಾತನಾಡಿದರು.
ಅಧ್ಯಯನಕ್ಕೆ ಕೊನೆಯೇ ಇಲ್ಲ, ಕಾನೂನಿನ ಅಗಲ, ಆಳ ಅರಿತಷ್ಟು ವಕೀಲರ ವೃತ್ತಿ ನೈಪುಣ್ಯತೆ ಹೆಚ್ಚುತ್ತದೆ, ಈ ನಿಟ್ಟಿನಲ್ಲಿ ವಕೀಲರು ಕಕ್ಷಿದಾರರ ಹಿತ ರಕ್ಷಣೆಗೆ ತಮ್ಮ ಪ್ರಯತ್ನ ಯಶಸ್ವಿಯಾಗಿ ಮುಂದುವರೆಸಬಹುದು ಎಂದು ಅಭಿಪ್ರಾಯಪಟ್ಟರು.
ವಕೀಲರು ತಮ್ಮಲ್ಲಿ ಬರುವ ಸಾರ್ವಜನಿಕರಿಗೆ ಕಾನೂನಿನ ಅರಿವು ಮೂಡಿಸುತ್ತಲೇ ಇರಬೇಕು, ಕಾನೂನಿನ ಅರಿವು ಹೆಚ್ಚಾದಷ್ಟು ಅಪರಾಧಗಳ ಸಂಖ್ಯೆಯೂಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ವಕೀಲರ ಜವಾಬ್ದಾರಿ ಅತಿ ಮುಖ್ಯವಾದುದು ಎಂದರು.
ಲೋಕಅದಾಲತ್, ಜನತಾ ನ್ಯಾಯಾಲಯ ಪ್ರಕ್ರಿಯೆಗಳು ಯಶಸ್ವಿಯಾಗಿ ಪ್ರಕರಣಗಳ ಇತ್ಯರ್ಥದಲ್ಲಿ ವಕೀಲರ ಸಹಕಾರ ಮುಖ್ಯವಾಗಿದೆ, ಕಕ್ಷಿದಾರರ ಅಲೆದಾಟ ತಪ್ಪಿಸಿ ಶೀಘ್ರ ನ್ಯಾಯ ಸಿಗುವಂತೆ ಮಾಡಲು ಇರುವ ಅತ್ಯುತ್ತಮ ಮಾರ್ಗವಾದ ಲೋಕ ಅದಾಲತ್‌ನಲ್ಲಿ ಹೆಚ್ಚು ಪ್ರಕರಣ ಇತ್ಯರ್ಥಕ್ಕೆ ವಕೀಲರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಬಂಗಾರಪೇಟೆ ವಕೀಲರ ಸಂಘದಿಂದ ನ್ಯಾಯಾಧೀಶರಾದ ಕೇಶವಮೂರ್ತಿ, ಪತ್ನಿ ಅಶ್ವಿನಿ ದಂಪತಿಗಳನ್ನು ಸನ್ಮಾನಿಸಲಾಯಿತು.
ನ್ಯಾಯಾಧೀಶರಾದ ರಮಾಲಿ ನಡಾಫ್, ಚಂದ್ರಶೇಖರ್,ಬಂಗಾರಪೇಟೆ ವಕೀಲರ ಸಂಘದ ಅಧ್ಯಕ್ಷ ಎಸ್.ನಾರಾಯಣಸಪ್ಪ, ಕಾರ್ಯದರ್ಶಿ ವಿಜಯಕುಮಾರ್, ಕೆಜಿಎಫ್ ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ, ಹಿರಿಯ ವಕೀಲ ಪಲ್ಲವಿ ಮಣಿ, ನಂಜುಂಡಪ್ಪ, ವಿವಿ. ಪ್ರಸಾದ್, ಅಮರೇಶ್, ಬಿ.ಸಿ.ಪರಮೇಶ್, ಸುಮಾ ಸಂತೋಷ್, ಶ್ರೀನಾಥ್, ರಾಜಗೋಪಾಲ್, ಎನ್.ನಾರಾಯಣಪ್ಪ, ಮೋಹನ್ ಕುಮಾರ್, ಶಿವರಾಂ ಸುಬ್ರಹ್ಮಣ್ಯ, ಅಶ್ವತ್ಥನಾರಾಯಣ, ಅಶ್ವಥ್ಥನಾರಾಯಣಮೂರ್ತಿ, ಪಂಕಜ, ಗಾಯತ್ರಿ, ಪಲ್ಲವಿ, ಸಂಗೀತಾ ಇದ್ದರು. ವಕೀಲ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.