ವಹಿಸಿದ ಜವಾಬ್ದಾರಿ ಬದ್ದತೆಯಿಂದ ನಿರ್ವಹಣೆ-ಡಿಡಿಪಿಐ
ಕೋಲಾರ,ಆ,೯-ತಮಗೆ ನೀಡಿದ ಕರ್ತವ್ಯದಲ್ಲಿ ಲೋಪವಾಗದಂತೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದ್ದು ಮಾತ್ರವಲ್ಲ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಗುಣಾತ್ಮಕಗೊಳಿಸಲು ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರು ಬದ್ದತೆಯಿಂದ ಕೆಲಸ ಮಾಡಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ಶ್ಲಾಘಿಸಿದರು.
ನಗರದ ಶಾಲಾ ಶಿಕ್ಷಣ ಇಲಾಖೆಯ ತಮ್ಮ ಕಚೇರಿಯಲ್ಲಿ ಈವರೆಗೂ ವಿಷಯ ಪರಿವೀಕ್ಷಕರಾಗಿ ಕೆಲಸ ಮಾಡಿ ಇದೀಗ ವರ್ಗಾವಣೆಗೊಂಡಿರುವ ಕೃಷ್ಣಪ್ಪ, ಗಾಯತ್ರಿ, ಶಶಿವಧನ, ಸಹಾಯಕ ಸಮನ್ವಯಾಧಿಕಾರಿ ಮೋಹನ್ ಬಾಬು, ತಾಂತ್ರಿಕ ಸಹಾಯಕರಾದ ಮಾನಸ, ಸಿರಾಜುದ್ದೀನ್‌ರನ್ನು ಸನ್ಮಾನಿಸಿ ಮಾತನಾಡಿದರು.
ಇಲಾಖೆಯಲ್ಲಿನ ಕೆಲಸದ ಒತ್ತಡ ಸಮರ್ಪಕವಾಗಿ ನಿರ್ವಹಿಸಿರುವ ಈ ಅಧಿಕಾರಿಗಳು, ಪರೀಕ್ಷಾ ಕಾರ್ಯಗಳು, ಬೋಧನಾ ಕೌಶಲ್ಯ ವೃದ್ದಿಗೆ ನೆರವು, ಶಾಲೆಗಳಿಗೆ ಭೇಟಿ, ಶಿಕ್ಷಕರಿಗೆ ವಿಷಯವಾರು ಮಾರ್ಗದರ್ಶನ, ದಾಖಲೆಗಳ ನಿರ್ವಹಣೆ, ಪಠ್ಯಪುಸ್ತಕ ಸಮರ್ಪಕ ಸರಬರಾಜು, ಶಾಲೆಗಳಲ್ಲಿನ ಪರಿಸರ, ಯುವಸಂಸತ್ ಮತ್ತಿತರ ಕ್ಲಬ್‌ಗಳ ನಿರ್ವಹಣೆ ಎಲ್ಲಾ ಕಾರ್ಯಗಳಲ್ಲೂ ಯಶ ಸಾಧಿಸಿದ್ದಾರೆ ಎಂದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಮತ್ತಷ್ಟು ಉತ್ತಮ ಪಡಿಸುವ ನಿಟ್ಟಿನಲ್ಲಿ ಇವರೆಲ್ಲರ ಸೇವೆ ಅಮೂಲ್ಯವಾಗಿದೆ, ನಿಯಮಾನುಸಾರ ೫ ವರ್ಷ ತಮ್ಮ ಬೋಧಕೇತರ ಕರ್ತವ್ಯ ನಿರ್ವಹಿಸಿ ಇದೀಗ ಮತ್ತೆ ಶಾಲೆಗಳಿಗೆ ತೆರಳಿದ್ದು, ಅಲ್ಲಿಯೂ ಉತ್ತಮ ಕರ್ತವ್ಯ ನಿರ್ವಹಣೆಯ ಮೂಲಕ ಹೆಸರು ಗಳಿಸಿ ಎಂದು ಶುಭ ಕೋರಿದರು.
ಶಿಕ್ಷಣಾಧಿಕಾರಿ ವೀಣಾ ಮಾತನಾಡಿ, ಯಾವುದೇ ಹುದ್ದೆಗೆ ಹೋದರೂ ನಿಮ್ಮ ಕರ್ತವ್ಯ ನಿರ್ವಹಣೆಯ ಮೂಲಕ ಹೆಸರು ಗಳಿಸುತ್ತೀರಿ ಎಂಬ ವಿಶ್ವಾಸವಿದೆ ಎಂದು ಶುಭ ಹಾರೈಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಷಯ ಪರಿವೀಕ್ಷಕರಾದ ಗಾಯತ್ರಿ, ದಾಖಲೆಗಳ ನಿರ್ವಹಣೆ, ಶಿಕ್ಷಕರಿಗೆ ಮಾರ್ಗದರ್ಶನ ನೀಡುವಲ್ಲಿಯೂ ನಮ್ಮ ಪ್ರಯತ್ನ ಮಾಡಿದ್ದೇವೆ ಎಂದರು.
ಶಿಕ್ಷಣಾಧಿಕಾರಿಗಳಾದ ವೀಣಾ, ಸಗೀರಾ ಅಂಜುಂ, ಡಿವೈಪಿಸಿ ಗುರುಮೂರ್ತಿ, ವಿಷಯ ಪರಿವೀಕ್ಷಕ ಶಂಕರೇಗೌಡ, ತಾಂತ್ರಿಕ ಸಹಾಯಕ ಶರಣಪ್ಪಜಮಾದಾರ್, ಪ್ರಭಾರ ಪತ್ರಾಂಕಿತ ಸಹಾಯಕ ಗೋವಿಂದಗೌಡ, ಇಲಾಖೆಯ ರವೀಂದ್ರ, ಗೋವರ್ಧನ್, ಚಿರಂಜೀವಿ, ರಾಜು, ಪವಿತ್ರ, ರವಿ, ಸಂಧ್ಯಾ, ಶ್ರೀನಾಥ್, ವೇಣುಗೋಪಾಲ್, ರಾಜೇಶ್, ದೇವರಾಜ್, ಬೇಬಿಯಮ್ಮ, ಮಮತಮ್ಮ, ಅಪ್ಸಾನಾ, ಅಪ್ಸರ್ ಪಾಷಾ, ಬೈಯಮ್ಮ ಇದ್ದರು.