ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಲೇಖನಿಗಳ ವಿತರಣೆ
ಕೋಲಾರ,ಆ,೯- ನಗರದ ಸ್ವರ್ಣ ಭೂಮಿ ಫೌಂಡೇಶನ್ ಮತ್ತು ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕುರುಬರಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಗೌರವಾಧ್ಯಕ್ಷ ಟಿ ಸುಬ್ಬರಾಮಯ್ಯ ಮಾತನಾಡಿ ಸಂಸ್ಥೆಗಳಿಂದ ನೀಡಿರುವ ಪುಸ್ತಕಗಳನ್ನು ಹಾಗೂ ಲೇಖನಿಗಳನ್ನು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಬಳಸಿಕೊಂಡು ಸದುಪಯೋಗಪಡಿಸಿಕೊಳ್ಳಬೇಕೆಂದು ಹಾಗೂ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಸಮಯ ಪಾಲನೆ ಸಂಸ್ಕೃತಿ ಸಂಸ್ಕಾರ ಅರಿತು ಕೊಂಡು ಪಾಠ ಪ್ರವಚನಗಳನ್ನು ಹೇಳುವ ಗುರುಗಳಿಗೆ ಗೌರವ ನೀಡುವುದರ ಜೊತೆಗೆ ತಂದೆ ತಾಯಿ ಹೇಳಿದ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸಬೇಕೆಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ತಿನ ಪಿ. ನಾರಾಯಣಪ್ಪ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ನಡೆ ನುಡಿ ರೂಪಿಸಿಕೊಂಡು ದೇಶಕ್ಕೆ ಶಾಲೆಗೆ ಉತ್ತಮ ಹೆಸರನ್ನು ತರುವುದರ ಜೊತೆಗೆ ತಾವು ಸಮಾಜದಲ್ಲಿ ಒಳ್ಳೆಯ ಆದರ್ಶ ವ್ಯಕ್ತಿಗಳಾಗಿ ರೂಪುಗೊಂಡು ಪ್ರತಿಯೊಬ್ಬರಿಗೂ ಮಾದರಿಯಾಗಿ ತಂದೆ ತಾಯಿಗೆ ಹೆಸರನ್ನು ತರಬೇಕೆಂದು ಹೇಳಿದರು.
ಡಾ. ಅಂಚೆ ಎಂ ನಾರಾಯಣ ಸ್ವಾಮಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಜ್ಞಾನಿಗಳಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನೃತ್ಯ ಜಾನಪದ ಸಂಗೀತವನ್ನುಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೆಸರು ಮಾಡಬೇಕೆಂದರು.
ಸಾಮಾಜಿಕ ಕಾರ್ಯಕರ್ತ ಗೌರಿ ಪೇಟೆಯ ಕೆ.ಎನ್. ರವೀಂದ್ರನಾಥ್ ಮಾತನಾಡಿ ನಾನು ಈ ಶಾಲೆಯಲ್ಲಿ ಓದಿ ಬೆಳೆದು ದೊಡ್ಡವನಾಗಿದ್ದು ಮುಂದಿನ ದಿನಗಳಲ್ಲಿ ನನ್ನ ಕೈಲಾದ ಮಟ್ಟಿಗೆ ಸಹಾಯ ಹಸ್ತವನ್ನು ನೀಡುತ್ತೇನೆಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಿ.ಆರ್.ಪಿ ಯಾದ ಜಮೀರ್ ಸಾಬ್.ಮಖ್ಯಶಿಕ್ಷಕಿ ಡಿ.ಪ್ರಭಾವತಿ, ಟ್ರೇಡ್ ಯೂನಿಯನ್ ನೌಕರರ ಸಂಘದ ಶ್ರೀಧರ್, ಬೆಮೆಲ್ ಶ್ರೀನಿವಾಸ್, ದಿವಾಕರ್, ಗೌರಿ ಪೇಟೆಯ ರಮೇಶ್ ಸುಪ್ರೀಂ ಸೇವಾ ಸಂಸ್ಥೆಯ ಸುಪ್ರೀಂ, ಹಾಗೂ ಸಿಬ್ಬಂದಿ ಹಾಜರಿದ್ದರು.