ಹರ್ಮನ್ ಮೊಗ್ಲಿಂಗ್ ಸರ್ವಕಾಲಕ್ಕೂ ಸಲ್ಲುವವರು
ಕೋಲಾರ,ಆ,೯- ಜರ್ಮನಿಯಿಂದ ಕ್ರೈಸ್ತಧರ್ಮ ಪ್ರಚಾರದ ಸಲುವಾಗಿ ಕನ್ನಡನಾಡಿಗೆ ಆಗಮಿಸಿದ ಹರ್ಮನ್ ಮೊಗ್ಲಿಂಗ್ ಮಂಗಳೂರ ಸಮಾಚಾರದ ಮೂಲಕ ಮೊದಲ ಕನ್ನಡ ಪತ್ರಿಕಾ ಸ್ಥಾಪಕ ಮಾತ್ರವಲ್ಲದೆ ಕರ್ನಾಟಕ ಏಕೀಕರಣದಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ಕನ್ನಡ ಪತ್ರಿಕೋದ್ಯಮ ಇರುವ ತನಕ ಕನ್ನಡ ಪತ್ರಿಕ್ಯೋದ್ಯಮದ ಪಿತಾಮಹ ರೆವರೆಂಡ್ ಮೊಗ್ಲಿಂಗ್ ರವರ ಹೆಸರು ಸರ್ವಕಾಲಕ್ಕೂ ಜೀವಂತವಾಗಿರಲಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಪ್ರತಿಪಾದಿಸಿದರು.
ತಾಲ್ಲೂಕಿನ ಮಂಗಸಂದ್ರದ ಬೆಂಗಳೂರು ಉತ್ತರ ವಿ.ವಿ. ಸ್ನಾತಕೋತ್ತರ ಕೇಂದ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
೧೮೧೧ರಲ್ಲಿ ಜರ್ಮನಿಯಲ್ಲಿ ಜನಿಸಿ ಧರ್ಮಪ್ರಚಾರಕನಾಗಿ ಆಗಮಿಸಿದ ಮೊಗ್ಲಿಂಗ್ ಬಾಸಿಲ್ ಮಿಷನ್ ಪರವಾಗಿ ಕನ್ನಡ ಪತ್ರಿಕೆಯನ್ನು ಆರಂಭಿಸುವಾಗ ಹೊಂದಿದ್ದ ಭಾಷ ಶುದ್ಧತೆ, ವೈಯಕ್ತಿಕ ನಿಂದನೆಯಿಂದ ದೂರ, ಧರ್ಮ ನಿರಪೇಕ್ಷತೆ, ಅನಾಮಧೇಯ ಪತ್ರಗಳಿಗೆ ಅವಕಾಶವಿಲ್ಲವೆಂಬ ಧ್ಯೇಯಗಳು ಇಂದಿನ ಪತ್ರಕರ್ತರಿಗೂ ಆದರ್ಶಪ್ರಾಯವಾಗಿವೆಯೆಂದರು.
ಆಶಯ ಭಾಷಣವನ್ನು ಮಾಡಿದ ಸಂಯುಕ್ತ ಕರ್ನಾಟಕ ಪತ್ರಿಕೆಯ ವಿಶೇಷ ಪ್ರತಿನಿಧಿ ಎಚ್.ಆರ್. ಶ್ರೀಶ ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಪತ್ರಕರ್ತರಿಗೆ ಮಾತ್ರವಲ್ಲ, ಎಲ್ಲರಿಗೂ ಅನ್ವಯಿಸಲಿದೆ. ಪತ್ರಕರ್ತರು ಆಧುನಿಕ ತಂತ್ರಜ್ಞಾನವನ್ನು ನಿಯಮಾನುಸಾರ ಬಳಸಿಕೊಂಡು ಜ್ಞಾನಪ್ರಸಾರ ಮಾಡಬೇಕು. ಎಷ ಆಧುನಿಕ ಮಾಧ್ಯಮಗಳಿದ್ದರೂ ಮುದ್ರಣ ಮಾಧ್ಯಮದಲ್ಲೀ ಜನತೆ ವಿಶ್ವಾಸ ಹೊಂದಿರುವುದರಿಂದ ಸತ್ಯಾಂಶಕ್ಕೆ ಒತ್ತು, ಸಮಾಜದ ಹಿತಕ್ಕೆ ಆದ್ಯತೆ, ವಿವೇಚನೆಯಿಂದ ಕೂಡಿದ ಬರವಣಿಗೆ, ಖಾಸಗಿತನಕ್ಕೆ ಗೌರವ ನೀಡಿಕೆ, ಹಣ ಸಂಪಾದನೆಗಿಂತ ಪತ್ರಿಕಾಧರ್ಮ ಪಾಲನೆ, ವೃತ್ತಿ ಮನೋಧರ್ಮ ಅನುವನಗಳಿಗೆ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಂ.ಜಿ. ಪ್ರಭಾಕರ ಹಾಗೂ ಸಾಧಕ ಪತ್ರಕರ್ತ ಎಚ್.ಕೆ. ರಾಘವೇಂದ್ರ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಅವರು ಜ್ಞಾನವಿಕಾಸ, ನಿತ್ಯದ ಆಗುಹೊಗುಗಳ ಅರಿವು, ಭವಿಷ್ಯದ ದಾರಿ ನಿರ್ಧರಿಸುವ ಸಲುವಾಗಿ ಯುವಕರು ಪತ್ರಿಕೆಗಳನ್ನು ಓದಬೇಕೆಂದೂ, ಸಾರ್ವಜನಿಕ ಅಭಿಪ್ರಾಯವನ್ನು ಗಟ್ಟಿಯಾಗಿ ಬಿಂಬಿಸುವ ವ್ಯಕ್ತಿಗಳಾಗಿ ಹೊರಹೊಮ್ಮಬೇಕೆಂದೂ ಆಶಿಸಿದರು.
ಸನ್ಮಾನಿತ ರಾಘವೇಂದ್ರ ಮಾತನಾಡಿದರು.ಬೆಂಗಳೂರಪ್ಪರಿಂದ ಪ್ರಾರ್ಥನೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ವಿ. ಚೇತನ್ ಕುಮಾರ್ ಸ್ವಾಗತ, ಗಾಯತ್ರಿ ನಿರೂಪಿಸಿ ವಂದಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ ವಾರ್ತಾ ಇಲಾಖೆ ನಿರ್ಮಿಸಿರುವ ಡಿ.ವಿ.ಜಿ. ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.