ಕೊಟ್ಟು ಖುಷಿ ಪಡುವ ಸಂಸ್ಕೃತಿ ನಮ್ಮದು: ಬನ್ನೂರು ಕೆ.ರಾಜು
ಸಂಜೆವಾಣಿ ನ್ಯೂಸ್
ಮೈಸೂರು: ಆ.09:- ಮತ್ತೊಬ್ಬರ ಕಷ್ಟ- ನಷ್ಟಗಳಿಗೆ,ದುಃಖ-ದುಮ್ಮಾನಗಳಿಗೆ ಮಾನವೀಯತೆಯಿಂದ ಸ್ಪಂದಿಸಿ ಕೊಟ್ಟು ಖುಷಿ ಪಡುವ ಸುಸಂಸ್ಕೃತಿ ನಮ್ಮದಾಗಿದ್ದು ಇದನ್ನು ಪ್ರತಿಯೊಬ್ಬರೂ ಅನುಕ ರಿಸಿ ಅನುಸರಿಸಬೇಕೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅವರು ಹೇಳಿದರು.
ನಗರದ ಅಗ್ರಹಾರದ ತ್ಯಾಗ ರಾಜ ರಸ್ತೆಯಲ್ಲಿರುವ ಶ್ರೀ ಕೃಷ್ಣ ಲಲಿತಕಲಾ ಮಂದಿರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲೀಲಾ ಮನೋಹರ್ ದಂಪತಿ ಪುತ್ರಿ ಕು.ಧೃತಿ ಹುಟ್ಟು ಹಬ್ಬದ ಅಂಗವಾಗಿ ಇಂದು ನಡೆದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳು ವಿದ್ಯಾರ್ಥಿ ದಿಶೆಯಲ್ಲೇ ಓದುವುದರ ಜೊತೆಗೆ ಜೀವನದಲ್ಲಿ ಕಲೆ, ಸಾಹಿತ್ಯ , ಸಂಗೀತ ,ಸಂಸ್ಕೃತಿ, ಸಮಾಜ ಸೇವೆ ಸೇರಿದಂತೆ ಒಟ್ಟಾರೆ ಉತ್ತಮ ಚಿಂತನೆಯ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ಜತೆ ಜತೆಗೆ ಕಲಿಕೆಯ ಹಂತದಲ್ಲೇ ಜೀವನ ಮೌಲ್ಯ ಗಳನ್ನು ರೂಢಿಸಿಕೊಂಡಾಗ ಮಾತ್ರ ಪರಿಪೂರ್ಣ ಮನುಷ್ಯರಾಗಿ ಬೆಳೆಯಲು ಸಾಧ್ಯವೆಂದರು.
ಇವತ್ತು ಕಾಲ ಹಿಂದಿನಂತಿಲ್ಲ. ಓದುವ ಮಕ್ಕಳಿಗೆ ಇಂದು ನಮ್ಮ ಸಮಾಜದಲ್ಲಿ ಸಹಾಯ ಹಸ್ತಗ ಳು, ನೆರವಿನ ಮನಸ್ಸುಗಳು, ಉದಾರತೆಯ ಹೃದಯಗಳು ಬೇಕಾದಷ್ಟಿವೆ. ಜೊತೆಗೆ ಸರ್ಕಾರ ಕೂಡ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸವಲತ್ತು -ಸೌಲಭ್ಯ ನೀಡುತ್ತಿದ್ದು ಇದನ್ನೆಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಶಿಕ್ಷಣದಲ್ಲಿ ಹೆಚ್ಚಿನದನ್ನು ಸಾಧಿಸಬೇಕೆಂದ ಅವರು, ಎಲ್ಲರೂ ತಮ್ಮ ಹುಟ್ಟು ಹಬ್ಬವನ್ನು ಕು. ಧೃತಿ ಮನೋಹರ್ ರೀತಿ ಇತರರಿಗೆ ನೆರವಾಗುವುದರ ಮೂಲಕ ಸಮಾಜೋಪಯೋಗಿಯಾಗಿ ಸಾರ್ಥಕವಾಗಿ ಆಚರಿಸಿಕೊಳ್ಳಬೇಕೆಂದು ಹೇಳಿದರು.
ಲೀಲಾ ಮನೋಹರ್ ಮತ್ತು ಕು.ಧೃತಿ ಹಾಗು ಕು.ರಿಷಿಕಾ ಅವರು ವಿದ್ಯಾರ್ಥಿಗಳೆಲ್ಲರಿಗೂ ಉಚಿತವಾಗಿ ಸಮವಸ್ತ್ರ ವಿತರಣೆ ಮಾಡಿ ಎಲ್ಲರನ್ನೂ ಖುಷಿಪಡಿಸಿ ತಾವೂ ಖುಷಿಪಟ್ಟರು. ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಬಿ. ಎಂ. ಪರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕಿಯರಾದ ಮಹೇಶ್ವರಿ, ರೂಪಾ, ಕಲ್ಪನಾ, ದಾಕ್ಷಾಯಿಣಿ, ಅನಿತಾ, ವಿದ್ಯಾ, ಹಂಸಿಣಿ ಹಾಗು ಪತ್ರಕರ್ತ ಕಿಶೋರ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರಗಳನ್ನು ಕೊಡಿಸಿದ ಲೀಲಾಮನೋಹರ್ ಮತ್ತು ಕು.ಧೃತಿ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.