ಬೂಕನ ಕೆರೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.09: ಹುಟ್ಟೂರು ಬೂಕನಕೆರೆಗೆ ಇಂದು ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗ್ರಾಮ ದೇವತೆ ಗೋಗಾಲಮ್ಮ ಮತ್ತು ಮನೆ ದೇವರಾದ ಸ್ವತಂತ್ರ ಸಿದ್ದಲಿಂಗೇಶ್ವರರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಗವೀಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿಗಳಿಂದ ಆರ್ಶೀವಾದ ಪಡೆದರು.
ಹುಟ್ಟೂರು ಬೂಕನಕೆರೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳನ್ನು ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಮಾಲಾರ್ಪಣೆ ಮಾಡಿ ಸ್ವಾಗತಿಸಿದರಲ್ಲದೆ ಬಿ.ಎಸ್.ಯಡಿಯೂರಪ್ಪ ಅವರೊಂದಿಗಿದ್ದು ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡರು. ಶಾಸಕರೊಂದಿಗೆ ಬೂಕನಕೆರೆ ಗ್ರಾಮಸ್ಥರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಂಭ್ರಮದಿಂದ ಸ್ವಾಗತಿಸಿ ಬರಮಾಡಿಕೊಂಡರು. ಬೂಕನಕೆರೆಯ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರೊಂದಿಗೆ ಒಂದಷ್ಟು ಕಾಲ ಕಳೆದು ಗ್ರಾಮಸ್ಥರ ಕುಶಲೋಪರಿ ವಿಚಾರಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗ್ರಾಮ ದೇವತೆ ಗೋಗಾಲಮ್ಮ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಅನಂತರ ತಾವು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೋಟ್ಯಂತರ ರೂ ಅನುದಾನ ನೀಡಿ ಜೀರ್ಣೋದ್ದಾರ ಗೊಳಿಸಿದ್ದ ಗ್ರಾಮದ ಈಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಕಾಮಗಾರಿಗಳನ್ನು ವೀಕ್ಷಿಸಿದರು.
ಬೂಕನಕೆರೆಯಿಂದ ಸಮೀಪದ ಗವೀಮಠಕ್ಕೆ ಭೇಟಿ ನೀಡಿದ ಬಿ.ಎಸ್.ಯಡಿಯೂರಪ್ಪ ಗವೀಮಠದಲ್ಲಿರುವ ಕುಲ ದೇವರಾದ ಸ್ವತಂತ್ರ ಸಿದ್ದಲಿಂಗೇಶ್ವರರ ಗದ್ದುಗೆಗೆ ಪೂಜೆ ಸಲ್ಲಿಸಿದರು.
ಸ್ವಚ್ಛತೆಗೆ ಸೂಚನೆ:- ಗವೀಮಠದ ಸ್ವತಂತ್ರ ಸಿದ್ದಲಿಂಗೇಶ್ವರರ ಗದ್ದುಗೆಯ ಮುಂದೆ ಹರಿಯುತ್ತಿರುವ ಹಳ್ಳದಲ್ಲಿ ಗಿಡ ಗೆಡ್ಡೆಗಳು ತುಂಬಿಕೊಂಡಿದ್ದು ಅಲ್ಲಿಯ
ಅವ್ಯವಸ್ಥೆಯನ್ನು ನೋಡಿ ಬೇಸರಗೊಂಡ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಕ್ಷೇತ್ರ ಪವಾಡ ಪುರುಷರು ಹಾಗೂ ಬಸವೋತ್ತರ ಕಾಲದ ಮಹಾಶರಣ ಸ್ವತಂತ್ರ ಸಿದ್ದಲಿಂಗೇಶ್ವರರ ತಪೆÇೀಭೂಮಿ. ಇಂತಹ ಪವಿತ್ರ ಕ್ಷೇತ್ರ ಸದಾ ಸ್ವಚ್ಛತೆಯಿಂದ ಕಂಗೊಳಿಸಬೇಕು ಎಂದ ಯಡಿಯೂರಪ್ಪ ಮಠದ ಸುತ್ತಮುತ್ತಲಿನ ಪ್ರದೇಶವನ್ನು ಶೀಘ್ರವೇ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸೂಚಿಸುವಂತೆ ಸ್ಥಳೀಯ ಮುಖಂಡರಿಗೆ ತಿಳಿಸಿದರು.
ಈ ವೇಳೆ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು, ಗವೀಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್, ತಾ.ಪಂ.ಮಾಜಿ ಸದಸ್ಯ ಹುಲ್ಲೇಗೌಡ, ತಾಲೂಕು ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಬೂಕನಕೆರೆ ಮಧುಸೂದನ್, ಗ್ರಾಮ ಪಂಚಾಯತಿ ಅಧ್ಯಕ್ಷ ಶ್ಯಾಂಪ್ರಸಾದ್ ಸೇರಿದಂತೆ ಬೂಕನಕೆರೆ ಗ್ರಾಮಸ್ಥರು ಮತ್ತು ವೀರಶೈವ ಸಮಾಜದ ಮುಖಂಡರು ಉಪಸ್ಥಿತರಿದ್ದರು.