ರ್ಯಾಂಕ್ ಆಧಾರಿತ ಶಿಕ್ಷಣವನ್ನು ಬಿಟ್ಟು ನೈತಿಕ ಶಿಕ್ಷಣದತ್ತ ಗಮನ
ಸಂಜೆವಾಣಿ ವಾರ್ತೆ
ಮಂಡ್ಯ :ಆ.09- ರ್ಯಾಂಕ್ ಆಧಾರಿತ ಶಿಕ್ಷಣವನ್ನು ಬಿಟ್ಟು ನೈತಿಕ ಶಿಕ್ಷಣದತ್ತ ಗಮನ ಹರಿಸುವ ಅಗತ್ಯತೆ ಇದೆ ಎಂದು ಯೋಗ ಶಿಕ್ಷಕ ಎಚ್.ವಿ. ಶಿವರುದ್ರಸ್ವಾಮಿ ಅಭಿಪ್ರಾಯಿಸಿದರು.
ಕಾಲೇಜು ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ), ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ನಡೆದ 7 ದಿನಗಳ ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೈತಿಕ ಶಿಕ್ಷಣದಿಂದಾಗಿ ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ. ಕೇವಲ ಅಂಕಗಳಿಕೆಯಿಂದ ಏನೇನೂ ಪ್ರಯೋಜನವಿಲ್ಲ ಎಂದು ಪ್ರತಿಪಾದಿಸಿದರು.
ಆಧುನಿಕ ಜೀವನಶೈಲಿಯಿಂದಾಗಿ ಜನತೆ ಮಾನಸಿಕ ಒತ್ತಡ, ಸಕ್ಕರೆ ಕಾಯಿಲೆ, ಹೃದಯದ ಸಮಸ್ಯೆಗಳಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸದಾ ಒಂದಿಲ್ಲೊಂದು ಸಮಸ್ಯೆಯನ್ನು ಹೊತ್ತು ವೈದ್ಯರ ಬಳಿಗೆ ಹೋಗುತ್ತಿದ್ದಾರೆ. ಇದರಿಂದ ದೂರವಿರಲು ಯೋಗವು ಪೂರಕವಾಗಿದೆ ಎಂದು ಹೇಳಿದರು.
ಯೋಗವು ಭಾರತದ ಪ್ರಾಚೀನ ಕಲೆಯಾಗಿದ್ದು, ಪತಂಜಲಿಯವರಿಂದ ರೂಪುಗೊಂಡಿದೆ. ಪ್ರಸ್ತುತ ಯೋಗ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಹಲವಾರು ರಾಷ್ಟ್ರಗಳು ಯೋಗವನ್ನು ಅಳವಡಿಸಿಕೊಂಡಿವೆ ಎಂದು ಹೇಳಿದರು.
ಪ್ರಾಧ್ಯಾಪಕಿ ಡಾ. ಪ್ರವೀಳಾ ಮಾತನಾಡಿ, ಸುಸ್ಥಿರ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಸುಲಭ ಮಾರ್ಗ. ವಿದ್ಯಾರ್ಥಿಗಳು ಯೋಗ ಶಿಬಿರವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಹೇಮಲತಾ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಲೋಕೇಶ್ ಕೆ.ಆರ್., ಹಿರಿಯ ಪ್ರಾಧ್ಯಾಪಕರಾದ ಡಾ. ಸೈಯಿದಾ ಕೌಸರ್ ಫಾತಿಮಾ, ಡಾ. ದಯಾನಂದ ಸಾಗರ್, ಪತ್ರಾಂಕಿತ ವ್ಯವಸ್ಥಾಪಕ ರವಿಕಿರಣ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ಯೋಗ ತರಬೇತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಟಿ-ಶರ್ಟ್ ಮತ್ತು ಮ್ಯಾಟ್‍ಗಳನ್ನು ವಿತರಿಸಲಾಯಿತು.