ನಾಳೆ ಚೆಲುವ ಚಾಮರಾಜನಗರ ಭರಚುಕ್ಕಿ ಜಲಪಾತೋತ್ಸವ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.09-ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಚೆÀಲುವ ಚಾಮರಾಜನಗರ ಹೆಸರಿನಡಿ ಭರಚುಕ್ಕಿ ತಾಣದಲ್ಲಿ ಜಲಪಾತೋತ್ಸವವನ್ನು ಆಗಸ್ಟ್ 10 ರಂದು ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಅವರು ಚಾಮರಾಜನಗರ ಜಿಲ್ಲೆಯು ವೈವಿಧ್ಯಮಯ ಪವಾಸಿ ತಾಣಗಳನ್ನು ಹೊಂದಿದೆ. ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರೋತ್ಸಾಹ ನೀಡಿ ಇನ್ನಷ್ಟು ಪ್ರಚುರಗೊಳಿಸುವ ಉದ್ದೇಶದೊಂದಿಗೆ ಚೆಲುವ ಚಾಮರಾಜನಗರ ಪರಿಕಲ್ಪನೆಯಡಿ ಮೊದಲ ಕಾರ್ಯಕ್ರಮವಾಗಿ ಭರಚುಕ್ಕಿ ಜಲಪಾತೋತ್ಸವವನ್ನು ಆಗಸ್ಟ್ 10 ರಂದು ಒಂದು ದಿನ ಹಮ್ಮಿಕೊಳ್ಳಲಾಗಿದೆ ಎಂದರು.
ಜಲಪಾತವನ್ನು ಬಣ್ಣಬಣ್ಣದ ಕಂಗೊಳಿಸುವ ದೀಪದೊಂದಿಗೆ ವೀಕ್ಷಿಸಬಹುದು. ಆಗಸ್ಟ್ 10ರಂದು ಸಂಜೆ 5 ಗಂಟೆಗೆ ಜಲಪಾತದ ಬಳಿ ಹಾಕಲಾಗಿರುವ ವರ್ಣರಂಜಿತ ವೇದಿಕೆಯಲ್ಲಿ ಜಲಪಾತೋತ್ಸವದ ಉದ್ಘಾಟನೆ ನಡೆಯಲಿದೆ. ಬಳಿಕ ಮಲೆ ಮಹದೇಶ್ವರ ಬೆಟ್ಟ ಭಾಗದ, ಸ್ಥಳೀಯ ಸಂಸ್ಕøತಿ, ಕಲಾ ಅನಾವರಣ ಆಗಲಿದೆ. ಇದೇ ವೇದಿಕೆಯಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್ ಮತ್ತು ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಜನರು ಕಾರ್ಯಕ್ರಮವನ್ನು ವೀಕ್ಷಿಸಲು ಎಲ್.ಇ.ಡಿ. ಪರದೆಗಳನ್ನು ಹಾಕಲಾಗುತ್ತಿದೆ ಎಂದು ತಿಳಿಸಿದರು.
ಭರಚುಕ್ಕಿ ಜಲಪಾತೋತ್ಸವದ ಅಂಗವಾಗಿ ಅಕರ್ಷಕ ಧ್ವನಿ-ಬೆಳಕು ಕಾರ್ಯಕ್ರಮವು ಮೂಡಿಬರಲಿದೆ. ಜಿಲ್ಲೆಯ ಪ್ರವಾಸೋದ್ಯಮ ಕುರಿತ ಕಿರು ವಿಡಿಯೋ ಬಿಡುಗಡೆ ಹಾಗೂ ಪ್ರದರ್ಶನವಿದೆ. ಎನ್.ಆರ್.ಎಲ್.ಎಂ ಮತ್ತು ಮಹಿಳಾ ಸ್ವ ಸಹಾಯ ಸಂಘಗಳು ಅವರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಆಹಾರ ತಿನಿಸು ಮಳಿಗೆಗಳು ಫುಡ್ ಕೋರ್ಟ್ ಸಹ ಇರಲಿದೆ. ಬಣ್ಣದ ಬೆಳಕಿನಲ್ಲಿ ಭರಚುಕ್ಕಿ ಜಲಾಶಯವನ್ನು ಕಣ್ಮುಂಬಿಕೊಳ್ಳಲು ಆಕರ್ಷಕವಾದ ದೀಪಾಲಂಕಾರವು ಆಗಸ್ಟ್ 10ರಂದು ಸಂಜೆ 5 ರಿಂದ ರಾತ್ರಿ 10 ಗಂಟೆಯವರೆಗೆ ಇರಲಿದೆ. ಅಲ್ಲದೆ ಆಗಸ್ಟ್ 11 ರಂದು ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ ದೀಪಾಲಂಕಾರ ಇರಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಸ್ಟ್ 10 ರಂದು ಸಂಜೆ 5 ಗಂಟೆಗೆ ಭರಚುಕ್ಕಿ ಜಲಪಾತೋತ್ಸವಕ್ಕೆ ಚಾಲನೆ ನೀಡುವರು. ಪಶುಸಂಗೋಪನೆ ಮತ್ತು ರೇμÉ್ಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಜಲಪಾತೋತ್ಸವದ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ನೀಡುವರು. ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ ಎಸ್. ತಂಗಡಗಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವÀ ಎಚ್. ಕೆ. ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಸಚಿವÀ ಡಾ. ಎಚ್.ಸಿ. ಮಹದೇವಪ್ಪ ಅವರು ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಲಿದ್ದಾರೆ. ಶಾಸಕ ಎಂ.ಆರ್. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಲೋಕಸಭಾ ಸದಸ್ಯ ಸುನೀಲ್ ಬೋಸ್, ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಚ್.ಎಂ. ಗಣೇಶ್‍ಪ್ರಸಾದ್, ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ. ಮಾದೇಗೌಡ, ಕೆ. ವಿವೇಕಾನಂದ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ, ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ಚಂದ್ರು, ಕುದೇರಿನ ಚಾಮರಾಜನಗÀರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷÀ ವೈ.ಸಿ. ನಾಗೇಂದ್ರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಪಶು ಸಂಗೋಪನೆ ಮತ್ತು ರೇμÉ್ಮ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಭರಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸೂಚಿಸಿದ ಮೇರೆಗೆ ಚೆಲುವ ಚಾಮರಾಜನಗರ ಭರಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಲಪಾತೋತ್ಸವ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ ಅವರು ಮಾತನಾಡಿ ಭರಚುಕ್ಕಿ ಜಲಪಾತೋತ್ಸವಕ್ಕೆ ಬರುವ ವಾಹನಗಳಿಗೆ ಶಿವನಸಮುದ್ರದ ದರ್ಗದ ಬಳಿ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಜಲಪಾತೋತ್ಸವದ ಸ್ಥಳಕ್ಕೆ ಉಚಿತವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ತೆರಳಬೇಕಿದೆ. ಕಾರ್ಯಕ್ರಮಕ್ಕೆ ಅಗತ್ಯವಾದ ಬಂದೋಬಸ್ತ್ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯಿಂದ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ಅವರು ಮಾಧ್ಯಮ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.