ಅಷ್ಟಾವರಣಗಳಲ್ಲಿ ಪ್ರಮುಖವಾದದು ಪಾದೋದಕ-ಪ್ರಸಾದ
ಕಲಬುರಗಿ:ಆ.8:ಅಷ್ಟಾವರಣಗಳಲ್ಲಿ ಪ್ರಮುಖವಾದದು ಪಾದೋದಕ-ಪ್ರಸಾದವಾಗಿದೆ ಎಂದು ನಿವೃತ್ತ ಪ್ರಾಚಾಯೆ೯ ಶ್ರೀಮತಿ ನಿಂಗಮ್ಮ ಪತಂಗೆ ಹೇಳಿದರು.
ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣಮಾಸ ಸಾಂಸ್ಕøತಿಕ ಕಾಯ೯ಕ್ರಮಗಳ ಉಪನ್ಯಾಸ ಮಾಲಿಕೆಯಲ್ಲಿ ಪಾದೋಧಕ ಪ್ರಸಾದದ ಮಹತ್ವ ಕುರಿತು ಗುರುವಾರ ಮಾತನಾಡಿದರು.
ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳೇ ಅಂಗವಾಗಿವೆ, ಪಂಚಾಚಾರಗಳೇ ಪ್ರಾಣವಾಗಿವೆ, ಷಟ್‍ಸ್ಥಲಗಳೇ ಆತ್ಮವಾಗಿದೆ . ಅಷ್ಟಾವರಣಗಳಲ್ಲಿ ಪ್ರಮುಖವಾದ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವದ ಕುರಿತು ವಿವರಿಸಿದ್ದಾರೆ.
ಪಾದ ಮತ್ತು ಉದಕ ಈ ಎರಡೂ ಪದಗಳು ಸಂಯೋಜನೆಗೊಂಡು ಪಾದೋದಕವಾಗಿದೆ. ಅತ್ಯಂತ ಪ್ರಾಚೀನವಾದ ಶೈವಧರ್ಮದಲ್ಲಿಯೂ ಪಾದೋದಕದ ಪ್ರಸ್ತಾಪವಿದೆ. ಆದರೆ ಬಸವಾದಿ ಶರಣರು ಪಾದೋದಕವನ್ನು ಕಂಡುಕೊಂಡ ರೀತಿ ತುಂಬ ವಿಶಿಷ್ಟವಾದುದಾಗಿದೆ. ಗುರುವಿನ ಪಾದವ ತೊಳೆದು ಕುಡಿಯುವ ಉದಕಕ್ಕೆ ಪಾದೋದಕವೆಂದು ಹಾಗೂ ಸ್ಥಾವರಲಿಂಗ ಪೂಜಿಸುವಾಗ ಆ ಲಿಂಗದ ಮೇಲೆ ಉದಕವನೆರೆದು, ಅದರ ಬುಡದಲ್ಲಿ ಹರಿದುಬರುವ ಉದಕವೇ ಪಾದೋದಕವೆಂದು ಹಲವಾರು ವಿದ್ವಾಂಸರು, ಗುರು ಪರಂಪರೆಯವರು ಹೇಳಿದ್ದಾರೆ. ಆದರೆ ಲಿಂಗಾಯತ ಧರ್ಮದಲ್ಲಿ ಪಾದೋದಕವೆಂದರೆ ವಿಶಿಷ್ಟ ಅರ್ಥವಿದೆ.
ನೀರಿಗೆ ಸಂಸ್ಕಾರ ನೀಡಿದಾಗ ಅದು ಪಾದೋದಕವಾಗುತ್ತದೆ. ನೀರು ಶುದ್ಧೀಕರಣಗೊಂಡಾಗ, ಸ್ವಚ್ಛವಾದಾಗ ಪಾದೋದಕವಾಗುತ್ತದೆ. ಸ್ಥಾವರಲಿಂಗವನ್ನು ತೊಳೆದ ನೀರಾಗಲಿ, ಗುರುವಿನ ಪಾದವನ್ನು ತೊಳೆದ ನೀರಾಗಲಿ ಪಾದೋದಕವಾಗುವುದಿಲ್ಲ. ಇದಕ್ಕೆ ಬಸವಣ್ಣನವರ ಒಂದು ವಚನವನ್ನಿಲ್ಲಿ ಉದಾಹರಿಸಬಹುದು.
ಬಸವಣ್ಣ ಉದಕಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಲಿಂಗೋದಕವೆಂಬುದು ಶಿವಮಂತ್ರ ಸಂಸ್ಕಾರದಿಂದಾದರೆ, ಪಾದೋದಕವೆಂಬುದು ತನ್ನ ಇಷ್ಟಲಿಂಗಕ್ಕೆ ಮಜ್ಜನವೆರೆದುದೇ ಆಗಿದೆ. ಪ್ರಸಾದೋದಕವೆಂಬುದು ಲಿಂಗಕ್ಕೆ ಆರೋಗಣೆಯನ್ನು ಮಾಡಿಸಿರುವುದಾಗಿದೆ. ಇಷ್ಟಲಿಂಗದ ಮೂಲಕ ಸಂಸ್ಕಾರಗೊಂಡ ಉದಕವೇ ಪಾದೋದಕವಾಗಿದೆ. ಬ್ರಹ್ಮನ ನುಡಿಯಲ್ಲಿ ಪರುಷವಿದ್ದರೆ, ವಿಷ್ಣುವಿನ ನಯನದಲ್ಲಿ ಪರುಷಗುಣವಿದೆ. ಅದೇ ರೀತಿ ರುದ್ರನ ಹಸ್ತ ಪರುಷವಾದರೆ, ಕೂಡಲಸಂಗನ ಶರಣರ ಪಾದವೇ ಪುರುಷವಾಗಿದೆಯೆಂದು ಬಸವಣ್ಣ ಇನ್ನೊಂದು ವಚನದಲ್ಲಿ ಹೇಳಿದ್ದಾರೆ. ಶರಣರ ಪಾದವೇ ಪರುಷವಾಗುವದೆಂದರೆ. ಶರಣರ ಎಲ್ಲ ಅಂಗಾಂಗಳಲ್ಲಿಯೂ ಪರುಷ ಗುಣವಿದೆಯೆಂದು ಅರ್ಥವಾಗುತ್ತದೆ. ಈ ದೇಹವೆಂಬ ದೇವಾಲಯ ನಿಂತಿರುವುದೇ ಪಾದದ ಮೇಲೆ, ಇಂತಹ ಪಾದದಲ್ಲಿ ಪರುಷಗುಣವಿದೆಯೆಂದರೆ, ಅದು ಇಡೀ ದೇಹದಲ್ಲಿಯೇ ಪರುಷಗುಣವಿದೆಯೆಂದು ಅರ್ಥವಾಗುತ್ತದೆ. ಬ್ರಹ್ಮ-ವಿಷ್ಣು-ರುದ್ರರಿಗೆ ಒಂದೊಂದು, ಅಂಗದಲ್ಲಿ ಪರುಷ ಗುಣವಿದ್ದರೆ, ಶರಣರ ಪ್ರತಿಯೊಂದು ಅಂಗವೂ ಪರುಷಗುಣದಿಂದ ಕೂಡಿದೆ. ಹೀಗೆ ಇಡೀ ದೇಹವೇ ಪರುಷವಾದಾಗ ಅದು ದೇವಾಲಯವಾಗುತ್ತದೆ. ಶರಣರು ಪ್ರತಿಪಾದಿಸಿದ ಇಂತಹ ತತ್ವಗಳು ತುಂಬ ವೈಜ್ಞಾನಿಕವಾಗಿವೆ ಎಂದು ಹೇಳಿದರು.