ಜನಸಂಪರ್ಕದಿಂದ ‘ದೂರ’ವಾದ ಸುಂದರತಾಣ..ಪಡುಮಲೆಯ ದೇಯಿ ಬೈದೆತಿ ಔಷಧೀಯ ವನ
ಪುತ್ತೂರು; ಕಳೆದ ೮ ವರ್ಷಗಳ ಹಿಂದೆ ಈ ಔಷಧೀಯವನ ನಿರ್ಮಾಣಗೊಂಡಿತ್ತು. ಸುಮಾರು ೫೦೦ ಕ್ಕೂ ಹೆಚ್ಚಿನ ಔಷಧದ ಗಿಡಗಳು ಇಲ್ಲಿ ಬೆಳೆದು ನಿಂತಿವೆ. ಸುಮಾರು ೬ ಎಕರೆ ಪ್ರದೇಶದ ತುಂಬಾ ಎಲ್ಲಿ ನೀಡಿದರೂ ಪಾರಂಪರಿಕ ಔಷಧೀಯ ಗುಣಗಳನ್ನು ಹೊತ್ತ ಗಿಡಗಳು. ಅಲ್ಲಲ್ಲಿ ಹಣ್ಣಿನ ಗಿಡಗಳು. ಪ್ರತಿಯೊಂದು ಗಿಡದ ಬಳಿಯಲ್ಲೂ ಅದರ ಹೆಸರಿನ ನಾಮಫಲಕ. ಇದೊಂದು ನಿಜಕ್ಕೂ ಇದೊಂದು ಪ್ರವಾಸಿತಾಣ. ಆದರೆ ಪ್ರಸ್ತುತ ಇದು ಜನರಿಂದ ದೂರವಾಗಿ ನಿಂತ ಪ್ರದೇಶ. ಇದು ಪಡುಮಲೆಯ ಅದ್ಭುತ ನಾಟಿವೈದ್ಯೆ ದೇಯಿ ಬೈದೆತಿ ಔಷಧೀಯ ವನ…
ಪುತ್ತೂರಿನ ಪಡುಮಲೆಗೆ ಈ ಔಷಧೀಯ ವನದ ಕೊಡುಗೆ ಆಗ ಸಚಿವರಾಗಿದ್ದ ಬೆಳ್ಳಿಪ್ಪಾಡಿ ರಮಾನಾಥ ರೈ ಅವರದ್ದಾಗಿದೆ. ಆಗಿನ ಅರಣ್ಯ ಇಲಾಖೆಯ ಅಧಿಕಾರಿ ಶ್ರೀಧರ್ ಇದರ ರೂವಾರಿ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಈ ವನ ಜನರಿಂದ ದೂರವಾಗಲು ಒಂದು ಕಾರಣ ಇದೆ. ಇಲ್ಲಿ ತುಳುನಾಡಿನ ಐತಿಹಾಸಿಕ ವೀರಪುರುಷರಾದ ಕೋಟಿ-ಚೆನ್ನಯ ಹಾಗೂ ದೇಯಿ ಬೈದೆತಿ ಅವರ ಪುತ್ಥಳಿಗಳಿವೆ. ಅವರ  ಮನೆಯ ಪ್ರತಿಕೃತಿಯೂ ಇದೆ. ಕಿಡಿಗೇಡಿಯೊಬ್ಬ ದೇಯಿ ಬೈದೆತಿಯ ಪುತ್ಥಳಿ ಜತೆಗೆ ಅನಾಗರಿಕ ರೀತಿಯಲ್ಲಿ ವರ್ತಿಸಿ ಫೋಟೊ ಕ್ಲಿಕ್ಕಿಸಿದ ಕಾರಣ ದೊಡ್ಡ ಪ್ರತಿಭಟನೆಗೆ ಕಾರಣವಾಯಿತು. ಅಲ್ಲಿಗೆ ದೇಯಿ ಬೈದೆತಿ ಔಷಧೀಯ ವನಕ್ಕೆ ಬೀಗ ಬಿದ್ದಿತು. ಸಾರ್ವಜನಿಕರ ಸಂಪರ್ಕದಿಂದ ದೂರವಾಯಿತು.
ಔಷಧದ ಗಿಡಗಳ ತಾಯಿ ‘ಭಾರತಿ’
ಈಗ ಈ ಔಷಧೀಯ ವನ ಜನಸಂಪರ್ಕದಿಂದ ದೂರವಾದರೂ ಸಮೃದ್ಧವಾಗಿ ಬೆಳೆದಿದೆ. ಇಲ್ಲಿ ಗಿಡ ನೆಟ್ಟ ದಿನದಿಂದಲೂ ಈ ಗಿಡಗಳನ್ನು ಪೋಷಿಸುತ್ತಿರುವ ಮಹಿಳೆಯೊಬ್ಬರಿದ್ದಾರೆ. ಅರಣ್ಯ ಇಲಾಖೆಯೇ ಅವರಿಗೆ ಈ ಜವಾಬ್ದಾರಿಯನ್ನು ನೀಡಿದೆ. ಆಕೆ ಭಾರತಿ. ಬಡಗನ್ನೂರು ಗ್ರಾಪಂ ಸದಸ್ಯರಾಗಿದ್ದ ತನ್ನ ಯಜಮಾನರನ್ನು ಅಪಘಾತವೊಂದರಲ್ಲಿ ಕಳೆದುಕೊಂಡು ಇಬ್ಬರು ಮಕ್ಕಳನ್ನು ಪೋಷಿಸುತ್ತಿರುವ ಅವರು ಈ ಔಷಧೀಯ ವನದ ಗಿಡಗಳನ್ನೂ ತನ್ನ ಮಕ್ಕಳಂತೆ ಸಲಹುತ್ತಿದ್ದಾರೆ. ಪ್ರಸ್ತುತ ಈ ಔಷಧೀಯವನಕ್ಕೆ ಸಾರ್ವಜನಿಕರಿಗೆ ವೀಕ್ಷಣೆಗೆ ಲಭ್ಯವಾಗಿದ್ದರೂ ಹಿಂದಿನ ಕಹಿ ಘಟನೆಯ ನಂತರ ಇಲ್ಲಿಗೆ ಯಾರೂ ಬರುತ್ತಿಲ್ಲ. ವಿಶಾಲವಾದ ಕಾಡಿನ ರೀತಿಯಲ್ಲಿರುವ ಇಲ್ಲಿನ ಗಿಡ-ಮರಗಳಿರುವ ಈ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿ-ಸಿಬಂದಿಗಳನ್ನು ಬಿಟ್ಟರೆ ಈಕೆ ಮಾತ್ರ ಚಿರಪರಿಚಿತೆ. ಪ್ರತಿಯೊಂದು ಗಿಡಗಳ ಬಗ್ಗೆಯೂ ಮಾತನಾಡಬಲ್ಲ ಭಾರತಿ ಅವರ ಈ ಸೇವೆ ನಿಜಕ್ಕೂ ಶ್ಲಾಘನೀಯ. ಕಷ್ಟದಲ್ಲಿರುವ ಈಕೆಯನ್ನು ಈ ಗಿಡಗಳ ಸೇವೆಗೆ ಆಯ್ಕೆ ಮಾಡಿರುವ ಅರಣ್ಯ ಇಲಾಖೆ ಕೆಲಸವೂ ಶ್ಲಾಘನೆಗೆ ಅರ್ಹವಾಗಿದೆ.
‘ವೀಕ್ಷಣೆ ಅರಿವಿನ’ ಪ್ರವಾಸತಾಣ
೫೦೦ ಕ್ಕೂ ಹೆಚ್ಚು ಔಷಧೀಯ ಸಸ್ಯಗಳಿರುವ ಈ ದೇಯಿ ಬೈದೆತಿ ವನ ನಿಜವಾದ ಪ್ರವಾಸಿತಾಣವಾಗಿದೆ. ಕೇವಲ ವೀಕ್ಷಣೆಗೆ ಮಾತ್ರವಲ್ಲ. ಅರಿವಿನ ತಾಣವೂ ಆಗಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಔಷಧೀಯ ಸಸ್ಯಗಳ ವೀಕ್ಷಣೆಗೆ ಹೇಳಿ ಮಾಡಿಸಿದಂತಹ ಸ್ಥಳ ಇದಾಗಿದೆ. ಬಹುಷ; ಇಷ್ಟೊಂದು ಬೃಹತ್ ಮಟ್ಟದಲ್ಲಿರುವ ವನ ಜಿಲ್ಲೆಯಲ್ಲಿ ಎಲ್ಲೂ ಸಿಗಲಾರದು. ಅಷ್ಟೊಂದು ವೈವಿದ್ಯಮ ಪರಿಸರ. ಶಾಲಾ ಮಕ್ಕಳನ್ನು ಪ್ರವಾಸಕ್ಕಾಗಿ ಎಲ್ಲೆಲ್ಲೋ ಕರೆದುಕೊಂಡು ಹೋಗುವ ಶಿಕ್ಷಕರು ಈ ದೇಯಿ ಬೈದೆತಿ ವನಕ್ಕೆ ಕರೆದುಕೊಂಡು ಬಂದರೆ ಮಕ್ಕಳಿಗೆ ಒಂದಷ್ಟು ಸಸ್ಯಗಳ ಪರಿಚಯವಾದರೂ ಆಗಬಹುದು. ಅದು ಬದುಕಿಗೂ ಪ್ರಯೋಜನವಾಗಬಹುದು. ಇದನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿಸುವ ಮೊದಲು ಇಲ್ಲಿಗೊಬ್ಬ ಕಾವಲುಗಾರನ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಮಾಡಬೇಕು. ಇಲ್ಲವಾದರೆ ಈ ಪ್ರದೇಶ ಕೆಟ್ಟ ವಿಚಾರಗಳಿಗೂ ಪ್ರಸಿದ್ಧಿಯಾಗುವ ಅಪಾಯವಿದೆ. ಹಾಗಾಗಿ ಇಲ್ಲಿ ಎಚ್ಚರಿಕೆಯೂ ಅತೀ ಅಗತ್ಯವಾಗಿದೆ.
ಉದ್ಯಾನವನದಲ್ಲಿರುವ ಎಲ್ಲಾ ಸಸಿಗಳ ವಿವರಗಳನ್ನು ಅವುಗಳ ಜೊತೆಗೆ ನೀಡಲಾಗಿದೆ. ಅಲ್ಲದೆ ವ್ಯಕ್ತಿಯ ಜಾತಕ ನಕ್ಷತ್ರಕ್ಕೆ ಅನುಗುಣವಾಗಿ ಯಾವ ಗಿಡಗಳನ್ನು ಮನೆಯಲ್ಲಿ ನೆಡಬಹುದು ಎನ್ನುವ ಮಾಹಿತಿಯನ್ನೂ ಈ ಉದ್ಯಾನವನದಲ್ಲಿ ಕಲ್ಪಿಸಲಾಗಿದೆ. ಪರಿಸರಪ್ರೇಮಿಗಳು ಹಾಗೂ ನಾಟಿವೈದ್ಯ ಪರಂಪರೆ ನಡೆಸುತ್ತಿರುವ ಪ್ರತಿಯೊಬ್ಬರೂ ಒಂದು ನೋಡಲೇ ಬೇಕಾದ ಈ ಔಷಧೀಯ ವನ ಅರಣ್ಯ ಇಲಾಖೆ ನೀಡಿದ ಜಿಲ್ಲೆಗೊಂದು ಅತ್ಯುತ್ತಮ ಕೊಡುಗೆಯಾಗಿದೆ. ಶ್ರೇಷ್ಠ ಸಾಹಿತಿಗಳಾದ ತೇಜಸ್ವಿ, ಕಾರಂತರು ಬಯಸಿದ ‘ಪರಿಸರದಲ್ಲಿ ಕುಳಿತು ಪರಿಸರ ಅಧ್ಯಯನ’ ಮಾಡುವಂತಹ ಸ್ಥಳ ಇದಾಗಿದೆ.
ಮೇಘಾ ಪಾಲೆತ್ತಾಡಿ