ಹೊರರಾಜ್ಯಗಳಿಂದ ಬೆಂಗಳೂರಿಗೆ ಕಳಪೆ ಗುಣಮಟ್ಟದ ಮಾಂಸ- ಕ್ರಮಕ್ಕೆ ಆಗ್ರಹ
ಪುತ್ತೂರು: ಬೆಂಗಳೂರಿಗೆ ಅಕ್ರಮವಾಗಿ ಕಳಪೆ ಗುಣಮಟ್ಟದ ಮಾಂಸ ಸರಬರಾಜು ಮಾಡುವವರ ಮೇಲೆ ಕಾನೂನು ಕ್ರಮ ಸಹಿತ ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಎಸಿಪಿ ಚಂದನ್ ಕುಮಾರ್ ಮೇಲೆ ಕಾನೂನು ಕ್ರಮ ಜರಗಿಸುವಂತೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದೆ.
ಕಳೆದ ಅನೇಕ ವರ್ಷಗಳಿಂದ ಅಕ್ರಮವಾಗಿ ಹೊರರಾಜ್ಯಗಳಿಂದ ಸಿಟಿ ರೈಲ್ವೇ ನಿಲ್ದಾಣದ ಮೂಲಕ ಬೇರೇ ಬೇರೆ ರೆಸ್ಟೋರೆಂಟ್‌ಗಳಿಗೆ,  ಹೊಟೇಲ್ ಗಳಿಗೆ ಮಾಂಸ ಸರಬರಾಜಾಗುತ್ತಿದ್ದು, ಆಹಾರ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಥರ್ಮಾಕೋಲ್ ಬಾಕ್ಸ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಅದನ್ನು ವಿವಿಧ ರಾಸಾಯನಿಕಗಳಿಂದ ತೊಳೆದು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕ ದೃಷ್ಟಿಯಿಂದ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು. ಹಲವು ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜು.೨೬ ರಂದು ಸಂಜೆ ಬೆಂಗಳೂರು ಮೆಜೆಸ್ಟಿಕ್ ಗೆ ರಾಜಸ್ಥಾನದಿಂದ ೯೦ ಬಾಕ್ಸ್ ಗಳಲ್ಲಿ ಮಾಂಸ ಬಂದಿದ್ದು, ಅದು ದುರ್ವಾಸನೆಯಿಂದ ಕೂಡಿತ್ತು. ಈ ಸಂದರ್ಭದಲ್ಲಿ ಪರಿಶೀಲನೆ ಮಾಡುವಂತೆ ಸಾರ್ವಜನಿಕರು ಪಟ್ಟು ಹಿಡಿದಿದ್ದರು. ಆಗ ಅಲ್ಲಿದ್ದ ಅಬ್ದುಲ್ ರಝಾಕ್ ಎಂಬಾತ ಪರಿಶೀಲನೆ ಮಾಡಲು ಇಲಾಖೆಯವರಿಗೆ ಅಡ್ಡಿಪಡಿಸಿದ್ದ. ಆದರೆ ರಝಾಕ್ ಮೇಲೆ ಯಾವುದೇ ಕ್ರಮಕೊಳ್ಳಲಾಗಿಲ್ಲ. ಇದೊಂದು ಕೋಟ್ಯಾಂತರ ರೂಪಾಯಿಗಳ ಅಕ್ರಮ ಮಾಂಸದ ದಂಧೆಯಾಗಿದೆ. ಹಣಕ್ಕಾಗಿ ಅತ್ಯಂತ ಕಳಪೆ ಮಟ್ಟದ ಆಹಾರವನ್ನು ಸಾರ್ವಜನಿಕರಿಗೆ ನೀಡಿ ಅವರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆ. ತಕ್ಷಣ ಈ ಕುರಿತ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಮತ್ತು ಮಾಂಸದ ರೂವಾರಿಯನ್ನು ಬಂಧಿಸಬೇಕು ಎಂದು ಸಮಿತಿ ಅವರು ಮನವಿಯಲ್ಲಿ ಆಗ್ರಹಿಸಿದೆ.
ಖಂಡನೆ :
ಪ್ರಸ್ತುತ ರಾಜ್ಯ ಸರ್ಕಾರ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದು ಇದು ಖಂಡನೀಯ ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ತಿಳಿಸಿದೆ.