ರಾಜ್ಯ ಸರ್ಕಾರದ ಪತನಕ್ಕೆ ಜೆಡಿಎಸ್, ಬಿಜೆಪಿ ಸಂಚು: ಡಾ. ಸಾಗರ್
ಕಲಬುರಗಿ:ಆ.8: ರಾಜ್ಯಪಾಲರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿರುವ ಜೆಡಿಎಸ್ ಮತ್ತು ಬಿಜೆಪಿಯವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಅಪಪ್ರಚಾರಗಳನ್ನು ಮಾಡಿ ಸರ್ಕಾರವನ್ನು ಪತನಗೊಳಿಸಲು ಪಾದಯಾತ್ರೆ ಪ್ರತಿಭಟನೆಯ ಸಂಚು ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹಾಗೂ ನ್ಯಾಯವಾದಿ ಡಾ. ಡಿ.ಜಿ. ಸಾಗರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖುದ್ದು ಭೂ ಹಗರಣಗಳಲ್ಲಿ ಪಾಲ್ಗೊಂಡಿರುವ ಜೆಡಿಎಸ್ ಮತ್ತು ಬಿಜೆಪಿಯವರ ಮಾತುಗಳನ್ನು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದಲ್ಲಿ ಮುಳುಗಿ ಸರ್ವಾಧಿಕಾರದ ಧೋರಣೆ ಪ್ರದರ್ಶನ ನಡೆಸಿತು. ಸಂವಿಧಾನದ ಆಶಯ, ಪ್ರಜಾಪ್ರಭುತ್ವವನ್ನು ಪಾಲಿಸದೇ ಕೇವಲ ಹಿಜಾಬ್, ಹಲಾಲ್ ರಾಜಕಾರಣದಿಂದ ಜನರನ್ನು ಮರಳು ಮಾಡಲು ಯತ್ನಿಸಿದ ಬಿಜೆಪಿಗೆ ರಾಜ್ಯದ ಪ್ರಬುದ್ಧ ಜನರು ತಕ್ಕ ಉತ್ತರವನ್ನು ಕೊಟ್ಟಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು, ಬಿಜೆಪಿಯವರ ಸುಳ್ಳುಗಳನ್ನು ಜನರು ನಂಬಬಾರದು ಎಂದು ಅವರು ಹೇಳಿದರು.
ಮೂಡಾ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಜೆಡಿಎಸ್‍ನವರು ಮಾಡುತ್ತಿರುವ ಆರೋಪಗಳೂ ಸಹ ಸುಳ್ಳು. ಸಿದ್ಧರಾಮಯ್ಯ ಅವರು ಶೋಷಿತ ಜನಾಂಗಗಳ ಮತ್ತು ಹಿಂದುಳಿದ ವರ್ಗಗಳ ನಾಯಕರಾಗಿದ್ದಾರೆ. ಕಳೆದ ನಾಲ್ವತ್ತು ವರ್ಷಗಳಿಂದ ಯಾವುದೇ ಕಳಂಕವಿಲ್ಲದೇ ಕೆಲಸ ಮಾಡಿದ ಅವರ ವ್ಯಕ್ತಿತ್ವಕ್ಕೆ ಮಸಿ ಬಳೆಯಲು ಜೆಡಿಎಸ್ ಮತ್ತು ಬಿಜೆಪಿಯವರು ಹೊರಟಿದ್ದಾರೆ. ಉಭಯ ಪಕ್ಷಗಳ ಕೈಗೊಂಬೆಯಾಗಿ ರಾಜ್ಯಪಾಲರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ದೂರಿದರು.
ಒಳ ಮೀಸಲಾತಿ ಕುರಿತು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ ಡಾ. ಸಾಗರ್ ಅವರು, ಮೀಸಲಾತಿ ವ್ಯವಸ್ಥೆ ಕೇವಲ ಒಂದೇ ತಲೆಮಾರಿನವರಿಗೆ ನಿಲ್ಲಬೇಕೆನ್ನುವವರು ಮತ್ತು ಕ್ರಿಮಿಲಿಯರ್ ಜಾರಿಗೆ ತಂದರೆ ಬಡತನದಿಂದ ಬಂದ ಅಭ್ಯರ್ಥಿ ದೇಶದ ಸಂಸ್ಥೆಗಳಾದ ಐಐಎಂ, ಐಐಟಿ, ಐಪಿಸಿ ಸಂಸ್ಥೆಗಳಿಗೆ ಸೇರಲು ಅರ್ಹತೆ ಪಡೆಯುವ ಸಾಧ್ಯತೆಗಳು ಕಡಿಮೆ ಮತ್ತು ಐಎಎಸ್ ಮತ್ತು ಐಪಿಎಸ್ ಅಂತಹ ಹುದ್ದೆಗಳಿಗೆ ಹೋಗುವುದು ಕಷ್ಟವಾಗುವ ಸತ್ಯವನ್ನು ಕ್ರೀಮಿಲಿಯರ್ ಪದ್ದತಿಯನ್ನು ಪ್ರತಿಪಾದಿಸುವವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ನಿರಂತರ ಕಿರುಕುಳ ನೀಡಲಾಗುತ್ತಿದೆ. ಕಳೆದ 1ರಂದು ಸಂಶೋಧನಾ ವಿದ್ಯಾರ್ಥಿ ಪಿ. ನಂದಪ್ಪ ಅವರ ಮೇಲೆ ಹಲ್ಲೆಯಾಗಿದೆ. ಈ ಕುರಿತು ಪ್ರಕರಣ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್ ಮತ್ತು ಕುಲಸಚಿವ ಆರ್.ಆರ್. ಬಿರಾದಾರ್ ಮತ್ತು ಭದ್ರತಾ ಅಧಿಕಾರಿ ಸೇರಿ ಮೂವರ ವಿರುದ್ಧ ನರೋಣಾ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಹಾಗೂ ಪಿ. ನಂದಪ್ಪ ಅವರಿಗೆ ರಕ್ಷಣೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ 2ರಂದು ಯಾದಗಿರಿ ನಗರದಲ್ಲಿ ದಲಿತ ಪೋಲಿಸ್ ಅಧಿಕಾರಿ ಪರಶುರಾಮ್ ಅವರು ನಿಧನ ಹೊಂದಿರುವುದಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಅವರು, 30 ಲಕ್ಷ ರೂ.ಗಳು ಕೊಡಬೇಕೆಂದು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ಮತ್ತು ಅವರ ಪುತ್ರ ಪಂಪನಗೌಡ (ಸನ್ನಿಗೌಡ) ರೆಡ್ಡಿ ಪಾಟೀಲ್ ಅವರಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿ ಬ್ರೇನ್ ಹ್ಯಾಮರೇಜ್ ಆಗಿ ನಿಧನ ಹೊಂದಿದ್ದಾರೆ. ಕೂಡಲೇ ಅವರಿಬ್ಬರಿಗೂ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಬೇಕು. ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಪಿ. ಸುಳ್ಳದ್, ಸುರೇಶ್ ಹಾದಿಮನಿ, ಉಮೇಶ್ ನರೋಣಾ, ಎಚ್. ಶಂಕರ್, ಬಿ.ಸಿ. ವಾಲಿ, ಪ್ರೊ. ಅಂಬಣ್ಣ ಜೀವಣಗಿ ಮುಂತಾದವರು ಉಪಸ್ಥಿತರಿದ್ದರು.