ಸ್ವಾತಂತ್ರ್ಯ ದಿನೋತ್ಸವಕ್ಕೆ ಕಲಬುರಗಿ ವಿದ್ಯಾರ್ಥಿ ವಿಶೇಷ ಅತಿಥಿಯಾಗಿ ಭಾಗಿ
ಕಲಬುರಗಿ:ಆ.8: ಈ ಬಾರಿ ದೆಹಲಿಯಲ್ಲಿ ಜರುಗಲಿರುವ ಸ್ವಾತಂತ್ರ್ಯ ದಿನೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ನಗರದ ಶರಣಬಸವೇಶ್ವರ್ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂ ಸೇವಕ ಕು. ಆಕಾಶ್ ಎಸ್. ಪಾಟೀಲ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಡಾ. ದಶರಥ್ ಮೇತ್ರೆ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಕಾಂ ಮೂರನೇ ಸೆಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಕು. ಆಕಾಶ್ ಎಸ್. ಪಾಟೀಲ್ ಅವರು ಭಾರತ ಸರ್ಕಾರದ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಪ್ರಧಾನಮಂತ್ರಿಗಳ ಯೋಜನೆಗಳಾದ ಮೇರಿ ಮಾಠಿ ಮೇರಾ ದೇಶ್ ಮತ್ತು ಪೋಲಿಸ್ ಇಂಟರ್ನ್‍ಶಿಪ್ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅತ್ಯುತ್ತಮ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ 15ರಂದು ದೆಹಲಿಯಲ್ಲಿ ಜರುಗಲಿರುವ ಕಾರ್ಯಕ್ರಮಕ್ಕೆ ಎನ್‍ಎಸ್‍ಎಸ್ ಸ್ವಯಂ ಸೇವಕ ಕು. ಆಕಾಶ್ ಅವರಿಗೆ ವಿಶೇಷ ಅತಿಥಿಗಳಾಗಿ ಆಹ್ವಾನ ನೀಡಿದ್ದಾರೆ ಎಂದರು.
ಆಯ್ಕೆಯಾದ ವಿದ್ಯಾರ್ಥಿಗೆ ಸಂಘದ ಅಧ್ಯಕ್ಷ ಡಾ. ಶರಣಬಸಪ್ಪ ಅಪ್ಪಾ, ಮಾತೋಶ್ರೀ ದಾಕ್ಷಾಯಣಿ ಎಸ್. ಅಪ್ಪಾ, ಕಾರ್ಯದರ್ಶಿ ಬಸವರಾಜ್ ದೇಶಮುಖ್, ಎನ್‍ಎಸ್‍ಎಸ್ ಅಧಿಕಾರಿ ಪ್ರೊ. ದಯಾನಂದ್ ಎಸ್. ಹೊಡಲ್, ನ್ಯಾಕ್ ಸಂಯೋಜಕಿ ಡಾ. ಸುನಂದಾ ವಾಂಜರಖೇಡ್ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ. ಸುನಂದಾ ವಾಂಜರಖೇಡ್, ಪ್ರೊ. ದಯಾನಂದ್ ಎಸ್. ಹೊಡೆಲ್, ಪ್ರೊ. ಜಗನ್ನಾಥ್, ಆಕಾಶ್. ಎಸ್. ಪಾಟೀಲ್ ಅವರು ಉಪಸ್ಥಿತರಿದ್ದರು.