ಸಾರಿಗೆ ಸಮಸ್ಯೆ ನಿವಾರಣೆಗಾಗಿ 24×7 ನಿಯಂತ್ರಣಾ ಕೊಠಡಿ ಸ್ಥಾಪನೆ
ಕಲಬುರಗಿ:ಆ.8:ಕಲಬುರಗಿ ವಿಭಾಗ-2 ರ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ಗ್ರಾಮೀಣ, ಕಲಬುರಗಿ ದಕ್ಷಿಣ, ಆಳಂದ, ಜೇವರ್ಗಿ, ಯಡ್ರಾಮಿ ಹಾಗೂ ಅಫಜಲಪೂರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಾರ್ವಜನಿಕ ಪ್ರಯಾಣಿಕರ/ವಿದ್ಯಾರ್ಥಿಗಳು ಬಸ್ ಸಮಸ್ಯೆ ಹಾಗೂ ಮತ್ತಿತರ ಸಲಹೆ-ಸೂಚನೆಗಳನ್ನು ಪಡೆಯಲು ಸಂಸ್ಥೆಯಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕ ಪ್ರಯಾಣಿಕರ/ವಿದ್ಯಾರ್ಥಿಗಳು ಬಸ್ ಸಮಸ್ಯೆ, ಸಾರಿಗೆ ಸೌಲಭ್ಯ, ಬಸ್ ನಿಲ್ದಾಣ ಸ್ವಚ್ಛತೆ ಸೇರಿದಂತೆ ಮತ್ತಿತರ ಸಾರಿಗೆ ಸಮಸ್ಯೆಗಳ ನಿವಾರಣೆಗಾಗಿ ಸಾರ್ವಜನಿಕರು ಸಾರಿಗೆ ಸಂಬಂಧಿಸಿದಂತೆ ಸಮಸ್ಯೆ/ ಸಲಹೆ ಸೂಚನೆಗಳಿದ್ದಲ್ಲಿ ಸಂಸ್ಥೆಯ ನಿಯಂತ್ರಣಾ ಕೊಠಡಿಯ ದೂರವಾಣಿ ಸಂಖ್ಯೆ 6366423880 ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ
ಇದಲ್ಲದೇ ಕಲಬುರಗಿ ವಿಭಾಗ-2 ರಿಂದ ಪ್ರತಿ ಮಾಹೆಯ ಹುಣ್ಣಿಮೆ/ ಅಮವಾಸ್ಯೆ ದಿನಗಳಂದು ಜನದಟ್ಟಣೆಗನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾಯ್ದಿರಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಸರಣಿ ರಜೆಗಳ ದಿನಗಳಂದು 45 ಕ್ಕಿಂತ ಹೆಚ್ಚಿನ ಪ್ರಯಾಣಿಕರಿದ್ದಲ್ಲಿ (ಶೇ. 50 ಪುರುಷ ಮತ್ತು ಶೇ. 50 ಮಹಿಳೆಯರು) ಆಯಾ ತಾಲೂಕು ಹಾಗೂ ಕಲಬುರಗಿ ಜಿಲ್ಲಾ ಬಸ್ ನಿಲ್ದಾಣಗಳಿಂದ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಪ್ರಯಾಣಿಕರು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.