ಜೇವರ್ಗಿ ತಾಲೂಕಿನ ಕೂಡಿ ಗ್ರಾಮಕ್ಕೆ ಜಿ.ಪಂ.ಸಿಇಓ ಭೇಟಿ ಪ್ರವಾಹ ಪರಿಸ್ಥಿತಿ ಅವಲೋಕನ
ಕಲಬುರಗಿ:ಆ.8:ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಗುರುವಾರ ಜೇವರ್ಗಿ ತಾಲೂಕಿನ ಕೂಡಿ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು.
ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ನದಿ ದಂಡೆಯ ಕಡೆಗೆ ಯಾರು ಹೋಗಬಾರದು. ತಮ್ಮ ಜಾನುವಾರುಗಳನ್ನು ಬಿಡಬಾರದು, ಪ್ರವಾಹ ಹೆಚ್ಚಾದ್ದಲ್ಲಿ ಎತ್ತರದ ಪ್ರದೇಶದಲ್ಲಿರುವ ಕಾಳಜಿ ಕೇಂದ್ರಕ್ಕೆ ಹೋಗಬೇಕೆಂದು ತಿಳಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕ್ಷಣ ಕ್ಷಣದ ನೀರಿನ ಹರಿವಿನ ಪ್ರಮಾಣದ ಕುರಿತು ವರದಿ ನೀಡಲು ಸೂಚಿಸಿದರು, ನಂತರ ಅವರು ಗ್ರಾಮದಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಹಾಗೂ ನೋಡಲ್ ಅಧಿಕಾರಿಗಳಾದ ಸಂತೋಷ ಇನಾಮದಾರ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು