ಕಥೆಗಾರ ಡಾ.ರಾಜಶೇಖರ ನೀರಮಾನ್ವಿ ಇನ್ನಿಲ್ಲ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಇಲ್ಲಿನ ಖ್ಯಾತ ಕಥೆಗಾರ ಡಾ.ರಾಜಶೇಖರ ನೀರ ಮಾನ್ವಿ ಅವರು ಇಂದು ದೈವಾಧೀನರಾಗಿದ್ದಾರೆ
ವಯೋಸಹಜವಾಗಿ 83 ವರ್ಷದ ಅವರು ಕುಟುಂಬ ಸಮೇತರಾಗಿ ಬಳ್ಳಾರಿಯ ವೀರನಗೌಡ ಕಾಲೋನಿಯಲ್ಲಿ ವಾಸವಾಗಿದ್ದರು.
ಪತ್ನಿ ಇಬ್ಬರು ಪುತ್ರರರು ಮತ್ತು ಓರ್ವ ಪುತ್ರಿ ಬಂಧು ಬಳಗವನ್ನು ಅಗಲಿದ್ದಾರೆ.
ಮೂಲತಃ ರಾಯಚೂರು ಜಿಲ್ಲೆಯ ನೀರ ಮಾನ್ವಿಯವರಾದ ಇವರು ಇಲ್ಲಿನ ವೀರಶೈವ ಕಾಲೇಜಿನಲ್ಲಿ ಭೂಗರ್ಭಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಅವರು ಬರೆದಿದ್ದು ಕೇವಲ 12 ಕಥೆಗಳಾದರೂ ಅವನ್ನು
“ಹಂಗಿನ‌ ಅರಮನೆಯ ಹೊರಗೆ ಮತ್ತು
“ಕರ್ಪುರದ ಕಾಯದಲ್ಲಿ”
ಎರೆಡು ಕಥಾ ಸಂಕಲಗಳನ್ನಾಗಿ ಲೋಹಿಯಾ ಪ್ರಕಾಶನ ಪ್ರಕಟಿಸಿತ್ತು. ಈ ಕಥೆಗಳು ಕನ್ನಡ ಕಥಾ ಸಾಹಿತ್ಯದಲ್ಲಿ ಅಂದು ಸಾಕಷ್ಟು ಪ್ರಭಾವ ಬೀರಿದ್ದವು.
ಕನ್ನಡ ಸಾಹಿತ್ಯದ ಕಥಾಲೋಕದ ಕೊಂಡಿಯೊಂದು ಕಳಚಿದಂತಾಗಿದೆ.
ನವ್ಯದ ಸಂದರ್ಭದಲ್ಲಿ ಬರೆಯಲು ಆರಂಭಿಸಿದ್ದ ಅವರು ತಮ್ಮ ಕಥೆಗಳಲ್ಲಿ ಪ್ರಧಾನವಾಗಿ ಆಧುನಿಕ ಬದುಕಿನ ತಲ್ಲಣ ,ಮನುಷ್ಯನ ಅಸ್ತಿತ್ವ, ಸಾಮಾಜಿಕ ಸ್ಥಿತ್ಯಂತರ, ಬಿರುಕು ಬಿಟ್ಟ ಬದುಕು ,ಹತಾಶೆ, ಮನುಷ್ಯ ಸಂಬಂಧಗಳ ಹುಡುಕಾಟ, ತಣ್ಣನೆಯ ಪ್ರತಿರೋಧಗಳಿದ್ದವು. ಅವರ ಬಹುಪಾಲು ಕಥೆಗಳು ಭಾರತೀಯ ಭಾಷೆಗಳಿಗೆ ಅನುವಾದ ವಾಗಿವೆ ಎನ್ನುವುದು ಕಥೆಗಳ ಹೆಚ್ಚುಗಾರಿಕೆ.
ಇವರ ಅಂತ್ಯ ಸಂಸ್ಕಾರ ನಾಳೆ ಬಳ್ಳಾರಿಯ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ.