ಆರ್.ಟಿ.ಪಿ.ಎಸ್. ಗುತ್ತಿಗೆ ಕಾರ್ಮಿಕರು ಸೌಲಭ್ಯ ಪಡೆಯುವಲ್ಲಿ ವಂಚಿತರಾಗಿದ್ದಾರೆ
(ಸಂಜೆವಾಣಿ ವಾರ್ತೆ)
ರಾಯಚೂರು,ಆ.೮- ಆರ್.ಟಿ.ಪಿ.ಎಸ್. ಗುತ್ತಿಗೆ ಕಾರ್ಮಿಕರ ಮೇಲೆ ದೌರ್ಜನ್ಯ ಹಾಗೂ ಸಂಘವನ್ನು ಹತ್ತಿಕ್ಕುವ ಹುನ್ನಾರವನ್ನು ಆರ್.ಟಿ.ಪಿ.ಎಸ್. ಕಾರ್ಯನಿರ್ವಾಹಕ ನಿರ್ದೇಶಕರು ಮಾಡುತ್ತಿದ್ದಾರೆ ಎಂದು ಗುತ್ತಿಗೆ ಕಾರ್ಮಿಕರ ಮಹಾ ಸಂಘದ ಅಧ್ಯಕ್ಷ ಅಯ್ಯಣ್ಣ ಮಹಾಮನಿ ಆರೋಪಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಆರ್.ಟಿ.ಪಿ.ಎಸ್, ಗುತ್ತಿಗೆ ಕಾರ್ಮಿಕರು ನಿರಂತರವಾಗಿ ಖಾಯಂಯಾತಿ ಸ್ವರೂಪವುಳ್ಳ ಕಾರ್ಯವನ್ನು ರಾಷ್ಟ್ರಮಟ್ಟದ ವಿದ್ಯುತ್ ಉತ್ಪಾದನಾ ಕೇಂದ್ರ ಶಕ್ತಿನಗರದಲ್ಲಿ ಸುಮಾರು ೧೦ ರಿಂದ ೨೫ ವರ್ಷಗಳಿಂದ ತಮ್ಮ ಜೀವ ಪಣಕ್ಕಿಟ್ಟು ಅತ್ಯಂತ ಉಷ್ಣ ಹಾಗೂ ಧೂಳಿನ ಪ್ರದೇಶದಲ್ಲಿ ದಕ್ಷತೆಯಿಂದ ಕರ್ತವ್ಯವನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಆರ್.ಟಿ.ಪಿ.ಎಸ್. ಗುತ್ತಿಗೆ ಕಾರ್ಮಿಕರು ಅನೇಕ ಶಾಸನ ಬದ್ಧ ಬೇಡಿಕೆಗಳನುಸಾರವಾಗಿ ಆರ್ಥಿಕ ಸವಲತ್ತುಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು .
ಗುತ್ತಿಗೆ ಕಾರ್ಮಿಕರ ಮಹಾ ಸಂಘದ ಉಪಾಧ್ಯಕ್ಷ ಎಸ್.ಬಿ. ಪಾಟೀಲ್ ಮಾತನಾಡಿ, ಇತ್ತೀಚೆಗೆ ಕೆಮಿಕಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ತಮಗೆ ಕಾರ್ಮಿಕ ಇಲಾಖೆಯ ಆದೇಶದಂತೆ ವೇತನ ಪರಿಷ್ಕರಿಸಿದ ೮% ರಷ್ಟು ಹೆಚ್ಚುವರಿ ಬಾಕಿಯೊಂದಿಗೆ ಪಾವತಿಸದೇ ಇರುವುದಕ್ಕೆ ಸದರಿ ವಿಭಾಗದ ಅಧಿಕಾರಿ ಹಾಗೂ ಕಾಂಟ್ರ್ಯಾಕ್ಟರ್ ಸೂಪರ್ ವೈಸರ್ ರವರಿಗೆ ನೀಡಲಾಗಿರುವ ಪತ್ರಕ್ಕೆ ಏಕಾಏಕಿ ಯಾವುದೇ ನೋಟೀಸ್ ನೀಡದೇ, ಮತ್ತು ಯಾವುದೇ ತಪ್ಪು ಮಾಡದೇ ಸದರಿ ಏಳು ಕಾರ್ಮಿಕರಿಗೆ ಗೇಟ್ ಪಾಸ್ ನೀಡದೇ ಕರ್ತವ್ಯಕ್ಕೆ ಅವಕಾಶ ನೀಡದೇ ಹೆದರಿಸುತ್ತಾ ಸಂಘದ ಒಗ್ಗಟ್ಟು ಒಡೆಯುವ ಹುನ್ನಾರ ನಡೆಸಲಾಗಿದೆ ಎಂದು ತಿಳಿಸಿದರು.
ಉಳಿದ ಬಾಕಿ ಸಮಸ್ಯೆಗಳಾದ ಕಾರ್ಮಿಕರಿಗೆ ಬೋನಸ್. ಉಪಧಾನ, ಭವಿಷ್ಯ ನಿಧಿಯ ಪಿಂಚಣಿ, ಕನಿಷ್ಟ ವೇತನ, ಬಾಕಿ ೫% ಹಾಗೂ ೮% ವೇತನ ಪಾವತಿ, ಕೋವಿಡ್-೧೯ರ ಅವಧಿಯ ಬಾಕಿ ವೇತನದ ಪಾವತಿ, ಪ್ಲೇ ಸ್ಲಿಪ್‌ಗಳನ್ನು ಹಾಗೂ ಮುಂತಾದ ಸಮಸ್ಯೆಗಳ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹಾದೇವಪ್ಪ ಗೌಡ, ರಂಗಾರೆಡ್ಡಿ, ಸಿದ್ದಪ್ಪಗೌಡ, ವೆಂಕಟೇಶ, ಖಾಜಾ ಹುಸೇನ್, ವಿಶ್ವನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.