ಪ್ರಯಾಣಿಕರಿಗೆ ವಿಶ್ರಾಂತಿ ಧಾಮ ಸ್ಥಾಪಿಸಿ: ಎಂಎಲ್ಸಿ ಸುನೀಲಗೌಡ ಪಾಟೀಲ ಸಾರಿಗೆ ಸಚಿವರಿಗೆ ಮನವಿ
ವಿಜಯಪುರ, ಆ.8 :ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯ ಕರ್ನಾಟಕದಲ್ಲಿ ಸಾರಿಗೆ ಇಲಾಖೆಯಿಂದ ಮೂಲಭೂತ ಸೌಕರ್ಯಗಳುಳ್ಳ ವಿಶ್ರಾಂತಿ ಧಾಮ ಆರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿದ ಅವರು, ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಮುಂತಾದ ಜಿಲ್ಲೆಗಳಿಂದ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ರಾಜ್ಯ ಸರಕಾರಿ ಬಸ್ಸುಗಳಲ್ಲಿ ಬೆಂಗಳೂರಿಗೆ ಸಂಚರಿಸುತ್ತಾರೆ. ಅದರಲ್ಲೂ ರಾತ್ರಿ ವೇಳೆ ಸಂಚರಿಸುವಾಗ ಸಾರಿಗೆ ಇಲಾಖೆ ಬಸ್ಸುಗಳು ಊಟ, ಉಪಹಾರಕ್ಕಾಗಿ ನಿಲ್ಲುವ ಖಾಸಗಿ ಹೋಟೇಲು ಮತ್ತಿತರ ಸ್ಥಳಗಳಲ್ಲಿ ಸೂಕ್ತವಾದ ಮೂಲಭೂತ ಸೌಕರ್ಯಗಳು ಇರುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಅಲ್ಲಿ ದೊರೆಯುವ ಖಾದ್ಯ ಪದಾರ್ಥಗಳ ಬೆಲೆಯೂ ಹೆಚ್ಚಿರುತ್ತದೆ. ಮತ್ತೊಂದಡೆ ಕೆಲವು ಖಾಸಗಿ ಬಸ್ಸುಗಳು ಅಲ್ಲಲ್ಲಿ ಅವರದೇ ಆದ ಬಸ್ ನಿಲ್ದಾಣ, ಶೌಚಾಲಯಗಳನ್ನು ಹೊಂದಿವೆ. ಹೀಗಾಗಿ, ರಾತ್ರಿ ವೇಳೆ ತಡವಾಗಿ ಹೊರಡುವ ಸರಕಾರಿ ಬಸ್ಸುಗಳು ಮಾರ್ಗ ಮಧ್ಯೆ ಅಲ್ಪ ವಿಶ್ರಾಂತಿಗಾಗಿ ನಿಲ್ಲಲು ಸ್ವಂತ ವಿಶ್ರಾಂತಿ ಧಾಮಗಳಿಲ್ಲ. ಮೇಲಾಗಿ, ಉತ್ತರ ಕರ್ನಾಟಕದ ಈ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವುದರಿಂದ ಬಹುತೇಕ ಬಸ್ಸುಗಳು ದೊಡ್ಡ ಊರುಗಳ ಬಸ್ ನಿಲ್ದಾಣಕ್ಕೂ ಹೋಗುವುದಿಲ್ಲ. ಹೀಗಾಗಿ ಸ್ಲಿಪರ್ ಕೋಚ್, ಕಲ್ಯಾಣ ರಥ ಮುಂತಾದ ಬಸ್ಸುಗಳಲ್ಲಿ ಪ್ರಯಾಣಿಸುವ ಹಿರಿಯರು, ಮಹಿಳೆಯರು ಮತ್ತು ಮಕ್ಕಳ ಹಲವಾರು ಬಾರಿ ಶೌಚಕ್ಕೂ ಪರದಾಡಬೇಕಾದ ದಯನೀಯ ಸ್ಥಿತಿ ಇದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ತೆರಳುವ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಹಾಗೂ ಒಟ್ಟು ಪ್ರಯಾಣದ ಮಧ್ಯೆ ಅಂದರೆ, ಮಧ್ಯ ಕರ್ನಾಟಕದ ಚಿತ್ರದುರ್ಗ ಅಥವಾ ಬೇರೆ ಸ್ಥಳವೊಂದರಲ್ಲಿ ಸಾರಿಗೆ ಇಲಾಖೆಯಿಂದಲೇ ಮೂಲಭೂತ ಸೌಕರ್ಯವನ್ನೊಳಗೊಂಡ ವಿಶ್ರಾಂತಿ ಧಾಮ ಆರಂಭಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಅಲ್ಲಿ, ಪ್ರಯಾಣಿಕರಿಗೆ ಕೈಗೆಟಕುವ ಬೆಲೆಯಲ್ಲಿ ಊಟ, ಉಪಹಾರ, ಚಹಾ, ಕಾಫಿ ಹಾಗೂ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಇದರಿಂದ ದೀರ್ಘ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಪಾಟೀಲ ಅವರು ಮನವರಿಕೆ ಮಾಡಿದರು.
ಸುನೀಲಗೌಡ ಪಾಟೀಲ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, ಕೆ.ಎಸ್.ಆರ್.ಟಿ.ಸಿ ಮತ್ತು ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ರಿಗೆ ಕರೆ ಮಾಡಿ, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ದಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.