ಅಸ್ಕಿ, ಬೆಕಿನಾಳ, ಬೂದಿಹಾಳ(ಪಿ.ಟಿ) ಕೆರೆ ನೀರು ತುಂಬಿಸುವಂತೆ ರೈತ ಸಂಘ ಆಗ್ರಹ
ವಿಜಯಪುರ,ಆ.8: ಜಿಲ್ಲೆಯ ತಾಳಿಕೋಟೆ ತಾಲೂಕಿನ ಅಸ್ಕಿ, ಬೆಕಿನಾಳ ಹಾಗೂ ಬೂದಿಹಾಳ ಪಿ.ಟಿ ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರು ನೀರಾವರಿ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡಿ, ಇದರಿಂದ ಈ ಭಾಗದ ನೂರಾರು ರೈತರಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗಲಿದ್ದು, ಈ ಕೆರೆಗಳು ತುಂಬುವುದರಿಂದ ಅಕ್ಕಪಕ್ಕದ ಜಲಮೂಲಗಳು ಅಭಿವೃದ್ಧಿಯಾಗಿ ಬಾವಿ, ಬೊರವೆಲ್‍ಗಳಲ್ಲಿ ನೀರು ಹೆಚ್ಚಾಗುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಆದ್ದರಿಂದ ತುರ್ತಾಗಿ ಈ 3 ಕೆರೆಗಳನ್ನು ತುಂಬಿಸುವಂತೆ ಎ.ಇ ಸಂಗಮೇಶ ಮುಂಡಾಸ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಳಿಕೋಟೆ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಿವಶಂಕ್ರಪ್ಪ ಸಜ್ಜನ ಅವರು ಮಾತನಾಡಿ, ಈಗಾಗಲೇ ಹಲವಾರು ಬಾರಿ ತಾಳಿಕೋಟೆ ತಹಶಿಲ್ದಾರರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅಸ್ಕಿ ಕೆರೆಯಲ್ಲಿಯೇ ಧರಣಿ ಸತ್ಯಾಗ್ರಹ ಮಾಡಲಾಗಿದ್ದು, ತಾಳಿಕೋಟೆ ತಹಶೀಲ್ದಾರರು ಮಧ್ಯ ಪ್ರವೇಶ ಮಾಡಿ ಚುನಾವಣಾ ಸಂದರ್ಭ ಇದೆ. ನಂತರದಲ್ಲಿ ಇಲಾಖೆಯ ಅಧಿಕಾರಿಗಳೊಡನೆ ಸಭೆ ಕರೆದು ನಿರ್ಣಯಿಸೋಣ ಎಂದು ಹೋರಾಟಗಾರರಿಗೆ ಮನವೊಲಿಸಿ ಧರಣಿ ಕೈಬಿಡುವಂತೆ ಮನವಿ ಮಾಡಿದ್ದರಿಂದ ಧರಣಿ ಮುಗಿಸಲಾಗಿತ್ತು. ಈಗ ಶಾಶ್ವತ ಪರಿಹಾರಕ್ಕಾಗಿ ಬೂದಿಹಾಳ -ಪೀರಾಪುರ ಏತನೀರಾವರಿ ಯೋಜನೆಯಡಿ ಪಕ್ಕದಲ್ಲಿಯೇ ಹಾಯ್ದಿರುವ ದೊಡ್ಡ ಪೈಪ್‍ಗಳ ಮೂಲಕ ಈ ಕೆರೆ ತುಂಬಿಸುವಂತೆ ಒತ್ತಾಯಿಸಲಾಯಿತು.
ರೈತ ಸಂಘದ ತಾಲೂಕಾ ಅಧ್ಯಕ್ಷ ಶ್ರೀಶೈಲ ವಾಲಿಕಾರ ಅವರು ಮಾತನಾಡಿ, ಆಸ್ಕಿ ಹಾಗೂ ಬೆಕಿನಾಳ ಗ್ರಾಮ ಪಂಚಾಯಿತಿ ವತಿಯಿಂದ ಸರ್ವ ಸದಸ್ಯರುಗಳ ಒಪ್ಪಿಗೆ ಮೇರೆಗೆ ಠರಾವು ಪಾಸು ಮಾಡಿ ಈ ಮೇಲಿನ 3 ಕೆರೆಗಳನ್ನು ತುಂಬಿಸುವಂತೆ ವರದಿ ಸಲ್ಲಿಸಿದ್ದಾರೆ. ಆದ್ದರಿಂದ ಶಾಶ್ವತ ಪರಿಹಾರಕ್ಕಾಗಿ ಪ್ರತಿ ವರ್ಷ ಕೆರೆಗೆ ನೀರು ತುಂಬಿಸಬೇಕೆಂದರು.
ಈ ವೇಳೆ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ (ಬ್ಯಾಲ್ಯಾಳ), ನಿಡಗುಂದಿ ತಾಲೂಕು ಅಧ್ಯಕ್ಷ ಕೆ.ಎಂ. ಗುಡ್ನಾಳ, ಗೌರವಾಧ್ಯಕ್ಷ ಅಲ್ಲಾಭಕ್ಷ ಲಷ್ಕರಿ, ಚಾಂದಸಾಬ ನದಾಫ, ಹನಮಗೌಡ ಬಿರಾದಾರ, ದೇವರೆಡ್ಡಿ ಬಿರಾದಾರ, ರಮೇಶ ವಡ್ಡೊಡಗಿ, ಈರಯ್ಯ ಆಲಾಳಮಠ, ಈರಣ್ಣ ಶಿವಸಂಪಗೇರ, ದೇವಿಂದ್ರ ಕುಲಕರ್ಣಿ, ಸೋಮನಗೌಡ ಕರಕಳ್ಳಿ, ಶ್ರೀಶೈಲ ಸಜ್ಜನ, ರಾಜುರೆಡ್ಡಿ ಕರಕಳ್ಳಿ, ಪ್ರಭುಗೌಡ ಪಾಟೀಲ, ನಿಂಗಣ್ಣ ಸಲಾದಳ್ಳಿ, ಮಲ್ಲಪ್ಪ ಸಜ್ಜನ, ಕಾಸಯ್ಯ ಹಿರೇಮಠ, ಮಲ್ಲಪ್ಪ ಮುದನೂರ ಸೇರಿದಂತೆ ಅನೇಕರು ಇದ್ದರು.