ತಾಯಿಯ ಎದೆ ಹಾಲು ಮಗುವಿಗೆ ಅಮೃತ ಸಮಾನ :ಡಾ. ಸವಿತಾ ಚಾಕೋತೆ
ಬೀದರ :ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೆಶನ್ ಆಫ್ ಇಂಡಿಯಾ ಬೀದರ ಶಾಖೆ ಹಾಗೂ ಇನ್ನರ್ ವ್ಹೀಲ್ ಕ್ಲಬ್, ಬೀದರ ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಸ್ತನಪಾನ ಸಪ್ತಾಹ” (ಆಗಸ್ಟ್ 1-7ರವರೆಗೆ) ಅಂಗವಾಗಿ ಎಫ್‍ಪಿಎಐ ಸಂಸ್ಥೆಯ ಸಭಾಂಗಣದಲ್ಲಿ ತಾಯಂದಿರರಿಗೆ ತಾಯಿಯ ಎದೆಹಾಲಿನ ಮಹತ್ವದ ಹಾಗೂ ಕುಟುಂಬ ಯೋಜನೆ ಕುರಿತು ಅರಿವು-ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಇನ್ನರ್ ವ್ಹೀಲ್ ಕ್ಲಬ್, ಬೀದರನ ಅಧ್ಯಕ್ಷರಾದ ಶ್ರೀಮತಿ ಕವಿತಾ ಪ್ರಭಾ ಇವರು ಕಾರ್ಯಕ್ರಮ ಉದ್ಘಾಟಿಸಿ, ತಾಯಂದಿರರು ಮಗುವಿಗೆ ತಪ್ಪದೇ ಎದೆಹಾಲು ಕುಡಿಸಬೇಕು, ತಾಯಿ ಮತ್ತು ಮಗುವಿನ ಆರೋಗ್ಯ ಚೆನ್ನಾಗಿರಬೇಕು ಎಂದು ತಿಳಿಸಿದರು.
ಎಫ್‍ಪಿಎಐ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಸವಿತಾ ಚಾಕೋತೆ ಇವರು ಮಗುವಿಗೆ ತಾಯಿಯ ಎದೆ ಹಾಲಿನ ಮಹತ್ವ, ಮಗುವಿಗೆ ತಾಯಿಯ ಎದೆ ಹಾಲಿನಿಂದ ದೊರಕುವ ಪೌಷ್ಟಿಕ ಆಹಾರದ ಕುರಿತು, ಮಗುವಿನ ಬೆಳವಣಿಗೆ, ಮತ್ತು ಮಕ್ಕಳಿಗೆ ಕೊಡುವ ಲಸಿಕೆಗಳ ಕುರಿತು ಮಾಹಿತಿ ನೀಡಿ, “ತಾಯಿಯ ಎದೆಹಾಲು ಮಗುವಿಗೆ ಅಮೃತಕ್ಕೆ ಸಮಾನ” ಆದ್ದರಿಂದ ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಎದೆಹಾಲು ಕುಡಿಸುವುದರ ಮುಖಾಂತರ ಮಕ್ಕಳ ಆರೋಗ್ಯಯುತ ಬೆಳವಣಿಗೆ ಮಾಡಬೇಕು ಎಂದು ಕರೆ ನೀಡಿದರು.
ಎಫ್‍ಪಿಎಐ ಸಂಸ್ಥೆಯ ಬಿಎಸ್‍ಸಿ ಸದಸ್ಯರಾದ ಶ್ರೀ ಸುಬ್ರಮಣ್ಯ ಪ್ರಭು ಇವರು ಮಾತನಾಡಿ, ತಾಯಿಯ ಎದೆಹಾಲು ಮಗುವಿನ ಆರೋಗ್ಯಯುತ ಬೆಳವಣಿಗೆಗೆ ಬಹಳಷ್ಷು ಮಹತ್ವದಾಗಿದೆ. ಗ್ರಾಮೀಣ ಮಹಿಳೆಯರು ಮಗುವಿಗೆ ಎದೆಹಾಲು ಕುಡಿಸುತ್ತಿದ್ದಾರೆ. ಆದರೆ ನಗರಪ್ರದೇಶದ ಮಹಿಳೆಯರು ಆಧುನಿಕತೆಯಿಂದ ಹಾಗೂ ಕೆಲಸದ ಒತ್ತಡದಿಂದ ತಮ್ಮ ಮಕ್ಕಳಿಗೆ ಎದೆಹಾಲು ಕುಡಿಸುವುದರಲ್ಲಿ ಹಿಂದೆ ಇದ್ದಾರೆ. ಆದ್ದರಿಂದ ನಗರಪ್ರದೇಶದ ಮಹಿಳೆಯರಿಗೆ ಎದೆಹಾಲಿನ ಮಹತ್ವದ ಕುರಿತು ಅರಿವು-ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಎಫ್‍ಪಿಎಐ ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಇವರು ಎಲ್ಲರಿಗೂ ಸ್ವಾಗತಿಸಿ, ಎಫ್‍ಪಿಎಐ ಸಂಸ್ಥೆಯಲ್ಲಿ ಸಿಗುವ ಆರೋಗ್ಯ ಸೇವೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಕುಟುಂಬವು ಮಹಿಳೆಯರ ಮೇಲೆ ಅವಲಂಬಿತವಾಗಿರುವುದರಿಂದ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಜೊತೆಗೆ ಮಕ್ಕಳ ಆರೈಕೆ ಕೂಡ ಉತ್ತಮ ರೀತಿಯಲ್ಲಿ ಮಾಡಬೇಕೆಂದು ತಿಳಿಸಿದರು. ಹಾಗೂ ಕುಟುಂಬ ಯೋಜನಾ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಮಕ್ಕಳ ನಡುವೆ ಅಂತರವಿಡಲು ಸಹಾಯಕವಾಗುವುದಲ್ಲದೇ ತಾಯಿ ಮತ್ತು ಮಗು ಇಬ್ಬರು ಆರೋಗ್ಯದಿಂದ ಇರಬಹುದು ಎಂದು ತಿಳಿಸಿದರು.
ಎಫ್‍ಪಿಎಐ ಸಂಸ್ಥೆಯ ವೈದ್ಯರಾದ ಡಾ: ಚಿನ್ನಮ್ಮ ಬಿರಾದಾರ ಇವರು ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಕುರಿತು, ಪೌಷ್ಟಿಕಾಂಶ ಆಹಾರದ ಕುರಿತು ಮಾಹಿತಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ 40 ಕ್ಕೂ ಹೆಚ್ಚು ಜನ ಹಾಲುಣಿಸುವ ತಾಯಂದಿರರು, ಎಫ್‍ಪಿಎಐ ನ ಸಿಬ್ಬಂದಿ ವರ್ಗದವರು ಹಾಗೂ ಇನ್ನರ್ ವ್ಹೀಲ್ ಕ್ಲಬ್ ಬೀದರನ ಸದಸ್ಯರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು.